ಮಡಿಕೇರಿ ಅ.13 : ಕ್ಯಾಂಟರ್ ವಾಹನದಡಿಗೆ ಸಿಲುಕಿ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರೆಸಾರ್ಟ್‍ವೊಂದರ ಬಳಿ ವರದಿಯಾಗಿದೆ.ಮೂಲತಃ ಕೆ.ಆರ್. ನಗರದ ಬೇರ್ಯ ಗ್ರಾಮದ ನಿವಾಸಿ ಬೈರವ(28)  ಎಂಬುವವರೇ ಮೃತ ಬೈಕ್‌ ಸವಾರನಾಗಿದ್ದು, ಮಡಿಕೇರಿಯಿಂದ ಸುಮಾರು 5 ಕಿ.ಮೀ ದೂರದಲ್ಲಿ ಕಾರೊಂದರ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನದ ಚಕ್ರ ಬೈಕ್ ಸವಾರನ ತಲೆ ಮೇಲೆ ಹರಿದು ಈ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.    ಬೈರವ ತಮ್ಮ ಬೈಕ್ ನಲ್ಲಿ ಮಡಿಕೇರಿಯಿಂದ ಕೆ.ಆರ್ ನಗರದ ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಅಪಘಾತದಿಂದ ಸುಮಾರು 1 ಗಂಟೆ ಕಾಲ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.   