ಆರೋಪಿ ಮಂಜುನಾಥ್‌ - ಮೃತ ಯುವತಿ ಕವನಾ ಬೆಂಗಳೂರು:  ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳೆಂದು ತಂದೆಯೊಬ್ಬ ಮಗಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ವರದಿಯಾಗಿದೆ. 20 ವರ್ಷದ ಕವನಾ ಮೃತ ಯುವತಿಯಾಗಿದ್ದು, ಮಂಜುನಾಥ್‌ (45) ಕೊಲೆ ಆರೋಪಿಯಾಗಿದ್ದಾನೆ.  ಮಗಳ ಕತ್ತು ಕೊಯ್ದು ಕೊಲೆ ಮಾಡಿರುವ ಆರೋಪಿಯು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.ಬೇರೆ ಜಾತಿಯ  ಯುವಕನೊಂದಿಗೆ ಪ್ರೀತಿ ಸಂಬಂಧ ಮುಂದುವರಿಸದಂತೆ ಮಂಜುನಾಥ್ ಮಗಳಿಗೆ ಈ ಹಿಂದೆ ಬುದ್ಧಿವಾದ ಹೇಳಿದ್ದರು. ಮನೆಯಲ್ಲಿ ಈ ವಿಚಾರವಾಗಿ ಮನಸ್ತಾಪ ಹೆಚ್ಚಾಗಿದ್ದರಿಂದ ಹುಡುಗನೊಂದಿಗೆ ಸಂಬಂಧ ಮುಂದುವರಿಸುವುದಿಲ್ಲ ಎಂದು ಮಗಳು ತಂದೆಗೆ ಮಾತು ಕೊಟ್ಟಿದ್ದಳು. ಆದರೆ, ಮತ್ತೆ ಕದ್ದು ಮುಚ್ಚಿ ಯುವಕನ ಜತೆ ಸಂಬಂಧ ಮುಂದುವರಿಸಿರುವ ವಿಚಾರ ತಿಳಿದು ಮಗಳನ್ನು ಬುಧವಾರ ರಾತ್ರಿ ಮಂಜುನಾಥ್‌ ತರಾಟೆಗೆ ತೆಗೆದುಕೊಂಡಿದ್ದು, ತಂದೆ, ಮಗಳ ನಡುವೆ ಮಾತಿನ ಚಕಮಕಿ ತಾರಕಕ್ಕೆ ಏರಿದೆ. ಈ ವೇಳೆ ಮಗಳ ಮೇಲೆ ಹಲ್ಲೆ ಮಾಡಿರುವ ಮಂಜುನಾಥ್‌, ಮನೆಯಲ್ಲಿದ್ದ ಕತ್ತಿಯಿಂದ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆನ್ನಲಾಗಿದೆ.'ಗುರುವಾರ ಬೆಳಗ್ಗೆ ಆರೋಪಿ ಮಂಜುನಾಥ್ ವಿಶ್ವನಾಥಪುರ ಪೊಲೀಸ್ ಠಾಣೆಗೆ ಬಂದು ಮಗಳನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಆತನನ್ನು ವಶ್ಕಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆʼ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ.