ಬೆಂಗಳೂರು, ಅ.11: ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿಯನ್ನು ಕೊಡಿಸುವುದಾಗಿ 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚನೆ ನಡೆಸಿದ್ದ ಆರೋಪಿಯನ್ನು ಇಲ್ಲಿನ ಹಲಸೂರುಗೇಟ್ಲೀ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.ಬುಧವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಜೆ.ಪಿ.ನಗರದ ಜಂಬೂಸವಾರಿ ದಿಣ್ಣೆಯ ಹರ್ಷ(24)ಬಂಧಿತ ಆರೋಪಿಯಾಗಿದ್ದು, ಆತ ವಂಚನೆ ನಡೆಸಿರುವ 6 ಲಕ್ಷಕ್ಕೂ ಹೆಚ್ಚಿನ ಹಣದ ಜಪ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.  ಅ.3ರಂದು ಸಂದೀಪ್.ಎಲ್ ಅವರು ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿಯನ್ನು ಕೊಡಿಸುವುದಾಗಿ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಹಲಸೂರುಗೇಟ್ ಇನ್‍ಸ್ಪೆಕ್ಟರ್ ಹನುಮಂತ ಭಜಂತ್ರಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಬಿ.ದಯಾನಂದ ಹೇಳಿದರು.  ಬಂಧಿತ ಆರೋಪಿಯು ಕೊರೋನ ವೇಳೆ ಬಿಬಿಎಂಪಿ ವಾರ್ ರೂಂನಲ್ಲಿ ಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡಿದ್ದು, ಬಳಿಕ ಉದ್ಯೋಗವಿಲ್ಲದೇ ಸುಲಭವಾಗಿ ಹಣಗಳಿಸಲು ವಂಚನೆಯಲ್ಲಿ ತೊಡಗಿದ್ದ ಎಂದು ಬಿ.ದಯಾನಂದ ತಿಳಿಸಿದರು.  ಆರೋಪಿಯು ಬಿಬಿಎಂಪಿಯಲ್ಲಿ ನೇರ ನೇಮಕಾತಿ ಮೂಲಕ ಮಾರ್ಷಲ್ ನೌಕರಿಗೆ, ನೇಮಕ ಮಾಡಿಕೊಳ್ಳುತ್ತಿದ್ದು, 3 ಸಾವಿರ ರೂ. ನೀಡಿದರೆ ನೇಮಕಾತಿ ಮಾಡಿಸುವುದಾಗಿ ನಂಬಿಸಿ, 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ತಲಾ 3 ಸಾವಿರ ರೂ. ಹಣವನ್ನು ಫೋನ್ ಪೇ ಮೂಲಕ ಪಡೆದು ನಕಲಿ ನೇಮಕಾತಿ ಆದೇಶದ ಪ್ರತಿಗಳನ್ನು ಸೃಷ್ಟಿಸಿ, ಅವುಗಳನ್ನೇ ನೈಜವಾದುವುಗಳೆಂದು ಬಿಂಬಿಸಿ, ವಾಟ್ಸಪ್ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಳುಹಿಸಿಕೊಟ್ಟಿವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಬಿ.ದಯಾನಂದ ಹೇಳಿದರು.  ಆರೋಪಿಯಿಂದ ಬಿಬಿಎಂಪಿಯ ಹೆಸರಿನಲ್ಲಿರುವ ಮಾರ್ಷಲ್ ನೌಕರಿಗೆ ನೇಮಕಾತಿ ಆದೇಶದ ಪ್ರತಿ, ಆರೋಪಿಯ ಹೆಸರಿನಲ್ಲಿರುವ ಬಿಬಿಎಂಪಿಯ ಗುರುತಿನ ಚೀಟಿ, ಫೋನ್ ಪೇ ಮೂಲಕ ಹಣವನ್ನು ಪಡೆದಿರುವ ಬಗ್ಗೆ ಸ್ಕ್ರೀನ್ ಶಾಟ್ ಪ್ರತಿಗಳು. ಆರೋಪಿತನ ಪ್ಯಾನ್ ಕಾರ್ಡ್ ಇನ್ನಿತರ ದಾಖಲೆಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಬಿ.ದಯಾನಂದ ವಿವರಿಸಿದರು.  