ಬೆಂಗಳೂರು, ಅ.11: ವರ್ಗಾವಣೆಗಾಗಿ ಬೆದರಿಕೆ ಹಾಕುತ್ತಿದ್ದ ಆರೋಪದಡಿ ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ. ಪಾಟೀಲ್ ಅವರ ಆಪ್ತ ಸಹಾಯಕ ಪ್ರಕಾಶ್ ಬೀಳಗಿ ಎಂಬುವರ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಆಪ್ತ ಕಾರ್ಯದರ್ಶಿ  ಹಾಗೂ ಸರಕಾರದ ಅಪರ ಕಾರ್ಯದರ್ಶಿಯಾಗಿರುವ ಕೆ.ಎ.ಹಿದಾಯತ್ತುಲ್ಲಾ ಅವರು ದೂರು ನೀಡಿದ್ದು, ಆರೋಪದ ಕುರಿತಂತೆ ಅಗತ್ಯ ದಾಖಲೆಗಳು, ವಾಟ್ಸಪ್ ಸಂದೇಶಗಳನ್ನು ದೂರಿನೊಂದಿಗೆ ಲಗತ್ತಿಸಿದ್ದಾರೆ.   ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ. ಪಾಟೀಲ್ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ಬೀಳಗಿ ಅವರು ಬೇರೆ ಬೇರೆ ಇಲಾಖೆಯ ಸಚಿವರ ಪತ್ರಗಳನ್ನು ನೀಡಿ ವರ್ಗಾವಣೆಗೆ ಪಟ್ಟು ಹಿಡಿದಿದ್ದರು. ಶಾಸಕ ಜೆಟಿ ಪಾಟೀಲ್ ಅವರಿಗೆ ಸಂಬಂಧವೇ ಇಲ್ಲದ ಕೆಲಸಗಳನ್ನು ಮಾಡಿಕೊಡುವಂತೆ ಒತ್ತಡ ಹೇರುತ್ತಿದ್ದರು. ಅವರ ಕುತಂತ್ರಗಳಿಗೆ ಬಗ್ಗದಿದ್ದಾಗ, ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವ ಬೆದರಿಕೆ ಹಾಕಿರುವುದಲ್ಲದೆ, ನಾನು ಕಚೇರಿಯಲ್ಲಿ ಇಲ್ಲದಿರುವಾಗ, ನಮ್ಮ ಕಚೇರಿಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಹೆದರಿಸುವ ಯತ್ನ ನಡೆಸಿದ್ದಾರೆ. ಸ್ವತಃ ಬೀಳಗಿ ಶಾಸಕರಿಗೆ ದಾರಿ ತಪ್ಪಿಸಿ ಸ್ಪೀಕರ್‌ಗೆ ನನ್ನ ವಿರುದ್ಧ ಪತ್ರವನ್ನೂ ಸಹ ಬರೆಸಿದ್ದರು ಎಂದು ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಕೆಎ ಹಿದಾಯತ್ತುಲ್ಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  ಚಿತ್ರದುರ್ಗದಲ್ಲಿ ಮೈಲಾರ ಲಿಂಗೇಶ್ವರ ಫಾರ್ಮಸಿ ಕಾಲೇಜಿಗೆ ಅನುಮತಿ ಕೇಳಿ ಪ್ರಕಾಶ್ ಬೀಳಗಿ ಪತ್ರ ಸಲ್ಲಿಸಿದ್ದಾರೆ. ಫಾರ್ಮಸಿ ಕಾಲೇಜಿಗೂ, ಶಾಸಕ ಜೆ.ಟಿ.ಪಾಟೀಲ್ ಅವರಿಗೆ ಸಂಬಂಧವೇ ಇಲ್ಲ. ಇದೇ ರೀತಿ ಶಾಸಕರಿಗೆ ಸಂಬಂಧವಿಲ್ಲದ ವರ್ಗಾವಣೆ ಕೋರಿಕಾ ಪತ್ರಗಳನ್ನು ನೀಡಿದ್ದಾರೆ. ಶಾಸಕರ ಆಪ್ತ ಸಹಾಯಕ ಎಂದು ಹೇಳಿಕೊಂಡು ವರ್ಗಾವಣೆ ದಂಧೆಯಲ್ಲಿ ಪ್ರಕಾಶ್ ಬೀಳಗಿ ಅವರು ತೊಡಗಿದಂತಿದೆ. ಈ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ನೀಡಿದ ವರ್ಗಾವಣೆ ಕೋರಿಕೆಗಳನ್ನು ಪರಿಶೀಲನೆಯಲ್ಲಿ ಇರಿಸಲಾಗಿದ್ದು, ಕೂಡಲೇ ಪ್ರಕಾಶ್ ಬೀಳಗಿ ವಿರುದ್ಧ ಅಗತ್ಯ ಕ್ರಮ ಜರುಗಿಸಬೇಕೆಂದು ಕೆ.ಎ. ಹಿದಾಯತ್ತುಲ್ಲಾ ದೂರಿನಲ್ಲಿ ತಿಳಿಸಿದ್ದಾರೆ.