ಚಿತ್ರ- twitter@IndexKarnatakaಬೆಂಗಳೂರು, ಅ.10: ವೈಟ್‍ಫೀಲ್ಡ್ ನಿಂದ ಚಲ್ಲಘಟ್ಟದವರೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ ಸೋಮವಾರದಿದ ಆರಂಭವಾಗಿದ್ದು, ಒಂದೇ ದಿನ 3.35 ಲಕ್ಷ ಜನರು ಈ ಮಾರ್ಗದಲ್ಲಿ ಸಂಚರಿಸಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ. ಸೋಮವಾರ ಬೆಳಗ್ಗೆ 5 ಗಂಟೆಗೆ ಬಹುನಿರೀಕ್ಷಿತ ಚಲ್ಲಘಟ್ಟ-ವೈಟ್‍ಫೀಲ್ಡ್ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪ್ರಾರಂಭಗೊಂಡಿತು. ಮೊದಲ ದಿನ ರಾತ್ರಿ 9 ಗಂಟೆವರೆಗೆ ಹೆಚ್ಚುವರಿ 40-50 ಸಾವಿರ ಪ್ರಯಾಣಿಕರು ಸಂಚರಿಸಿದ್ದಾರೆ. ಅದೇ ರೀತಿ, ಸಂಜೆ ಆರು ಗಂಟೆವರೆಗೆ ನೇರಳೆ ಮಾರ್ಗದಲ್ಲಿ ಸೋಮವಾರ 3.35ಲಕ್ಷ ಜನ ಸಂಚರಿಸಿದ್ದು, ಎಂದಿಗಿಂತ 25 ಸಾವಿರ ಹೆಚ್ಚಿನ ಜನರು ಓಡಾಡಿದ್ದಾರೆ. ಸೋಮವಾರ ರಾತ್ರಿ 9 ಗಂಟೆವರೆಗೆ ನೇರಳೆ ಮಾರ್ಗದಲ್ಲಿ 2,89,105 ಹಾಗೂ ಹಸಿರು ಮಾರ್ಗದಲ್ಲಿ 2,18,211 ಸೇರಿ 5,07,316 ಜನ ಪ್ರಯಾಣಿಸಿದ್ದಾರೆ. ಬೈಯಪ್ಪನಹಳ್ಳಿಯಿಂದ ವೈಟ್‍ಫೀಲ್ಡ್ ವರೆಗೆ 54,428 ಪ್ರಯಾಣಿಕರು ಸಂಚರಿಸಿದ್ದಾರೆ. ವಾರಾಂತ್ಯದಲ್ಲಿ ಚಲ್ಲಘಟ್ಟ-ವೈಟ್‍ಫೀಲ್ಡ್ ಮೆಟ್ರೋದಲ್ಲಿ ಮತ್ತಷ್ಟು ಜನರ ಓಡಾಟ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬಿಎಂ ಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಝ್ ಮಾಹಿತಿ ನೀಡಿದ್ದಾರೆ. 