ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಬೆಂಗಳೂರು, ಅ.10: ನಗರ ಪೊಲೀಸ್ ಆಯುಕ್ತರ ಕಚೇರಿ ಸಮೀಪದಲ್ಲಿದ್ದ ಕನ್ನಿಂಗ್ ಹ್ಯಾಮ್ ರಸ್ತೆಯ ಬಸ್ ನಿಲ್ದಾಣದ ಶೆಲ್ಟರ್ ಅನ್ನು ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದು, ಯಾವುದೇ ಕಳ್ಳತನ ನಡೆದಿಲ್ಲದಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಡೇ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಸೈನ್ ಪೋಸ್ಟ್ ಇಂಡಿಯಾ ಏಜೆನ್ಸಿಯವರು ನಿರ್ಮಿಸಿದ್ದ ಬಸ್ ಶೆಲ್ಟರ್‌ನ್ನು ಕಳವು ಮಾಡಲಾಗಿದೆ ಎಂದು ಕಂಪೆನಿ ವತಿಯಿಂದ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡ ಹೈಗ್ರೌಂಡ್ಸ್ ಪೊಲೀಸರು ಶಿವಾಜಿನಗರ ವಲಯದ ಬಿಬಿಎಂಪಿ ಅಭಿಯಂತರರನ್ನು ಸಂಪರ್ಕಿಸಿ ವಿಚಾರಣೆ ನಡೆಸಿದಾಗ ಬಸ್ ಶೆಲ್ಟರ್ ತೆರವುಗೊಳಿಸಿರುವುದು ತಿಳಿದುಬಂದಿದೆ ಎಂದರು.  ಸೈನ್ ಪೋಸ್ಟ್ ಇಂಡಿಯಾ ಏಜೆನ್ಸಿ ನಿರ್ಮಿಸಿದ ಬಸ್ ಶೆಲ್ಟರ್ ಕಾಮಗಾರಿಯು ಅಸಮರ್ಪಕವಾಗಿ, ಯಾವುದೇ ರೀತಿಯ ಮುಂಜಾಗರೂಕತಾ ಕ್ರಮ ವಹಿಸದೆ ನಿರ್ಮಾಣ ಮಾಡಿರುವುದು ಕಂಡು ಬಂದಿತ್ತು. ಸಾರ್ವಜನಿಕ ಬಸ್ ನಿಲ್ದಾಣವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರುವುದರಿಂದ ಬಸ್ ಶೆಲ್ಟರ್ ಕುಸಿದು ಬಿದ್ದಲ್ಲಿ ಹಲವಾರು ಪ್ರಯಾಣಿಕರಿಗೆ ಪ್ರಾಣ ಹಾನಿಯಾಗುವ ಸಂಭವವಿರುವುದನ್ನು ಇದನ್ನು ಗಂಭೀರವಾಗಿ ಗಮನಿಸಿ ಬಸ್ ಶೆಲ್ಟರ್ ನಿರ್ಮಿಸಿದ್ದ ಸೈನ್ ಪೋಸ್ಟ್ ಇಂಡಿಯಾ ಏಜೆನ್ಸಿಯ ಪ್ರತಿನಿಧಿ ರವಿರೆಡ್ಡಿ ಅವರನ್ನು ಸಂಪರ್ಕಿಸಿ, ಬಸ್ ಶೆಲ್ಟರ್ ನಿರ್ಮಿಸಲು ಪಾಲಿಕೆಯಿಂದ ಪಡೆದಿರುವ ಕಾರ್ಯಾದೇಶ ಪ್ರತಿಯನ್ನು ಬಿಬಿಎಂಪಿ ಕಚೇರಿಗೆ ಸಲ್ಲಿಸುವಂತೆ ತಿಳಿಸಿ, ಹಾಗೂ ಕಾಮಗಾರಿಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗೃತ ಕ್ರಮ ಕೈಗೊಂಡು ನಿರ್ಮಿಸಲು ವಸಂತನಗರ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೂಚಿಸಿದ್ದರು.  ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಕಾಮಗಾರಿಯನ್ನು ಅಪೂರ್ಣಗೊಳಿಸಿ ಸಂಬಂಧಪಟ್ಟ ಕಾರ್ಯಾದೇಶ ಪತ್ರದ ದಾಖಲೆಗಳನ್ನು ಸಹ ಕಚೇರಿಗೆ ಸಲ್ಲಿಸದೇ ಇರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಾಜಿನಗರ ವಾರ್ಡ್ ಬಿಬಿಎಂಪಿ ಅಧಿಕಾರಿಗಳು, ಆ.25ರಂದು ಅಸಮರ್ಪಕವಾಗಿ ನಿರ್ಮಾಣ ಮಾಡಿದ್ದ ಹಾಗೂ ಅಪೂರ್ಣಗೊಂಡಿರುವ ಬಸ್ ಶೆಲ್ಟರ್ ಅನ್ನು ತೆರವುಗೊಳಿಸಿ ಅದರ ಸಾಮಗ್ರಿಗಳನ್ನು ಶಿವಾಜಿನಗರ ವಾರ್ಡ್ ಕಚೇರಿಯ ಉಗ್ರಾಣದಲ್ಲಿ ಇರಿಸಿರುವುದು ತನಿಖೆಯಿಂದ ಕಂಡು ಬಂದಿದೆ ಎಂದು ಬಿ.ದಯಾನಂದ್ ತಿಳಿಸಿದರು.