ಬಂಧಿತ ಆರೋಪಿಗಳು ಬೆಂಗಳೂರು, ಅ.10: ಇಲ್ಲಿನ ಶಾಂತಿನಗರದಲ್ಲಿರುವ ಆದಿನಾಥ ಜೈನ ಮಂದಿರಕ್ಕೆ ಕೆಲಸಕ್ಕೆಂದು ಬಂದು ಮಂದಿರದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ರಾಜಸ್ತಾನ ಮೂಲದ ನಾಲ್ವರನ್ನು ಅಶೋಕನಗರ ಪೊಲೀಸರು ಬಂಧಿಸಿ ಕ್ರಮ ಜರುಗಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಸ್ಥಾನ ಮೂಲದ ಜೋಶಿರಾಮ್, ರೇಷ್ಮರಾಮ್ ಸೇರಿ ನಾಲ್ವರು ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 19,75 ಲಕ್ಷ ಮೌಲ್ಯದ 14 ಕೆ.ಜಿ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದರು.  ಕೃತ್ಯದಲ್ಲಿ ಆರು ಮಂದಿ ಪಾಲ್ಗೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.  ಶಾಂತಿನಗರದ ಆದಿನಾಥ ಜೈನ ಮಂದಿರದಲ್ಲಿ ಕೆಲ ತಿಂಗಳ ಹಿಂದೆ ಟೈಲ್ಸ್ ಕೆಲಸಕ್ಕೆ ಬಂದಿದ್ದ ಜೋಶಿರಾಮ್ ಹಾಗೂ ರೇಷ್ಮರಾಮ್ ಸೇರಿ ನಾಲ್ವರು ಆರೋಪಿಗಳು ಜೈನಮಂದಿರದಲ್ಲಿ ಅಳವಡಿಸಲಾಗಿದ್ದ ಬೆಳ್ಳಿ ಆಭರಣಗಳನ್ನು ಕಂಡು ಹಳೆಯ ಕಾಲದ ಅಭರಣವಾಗಿದ್ದು, ಹೆಚ್ಚು ಬೆಲೆಬಾಳಲಿದೆ ಎಂದು ಭಾವಿಸಿಕೊಂಡಿದ್ದರು. ಎರಡು ತಿಂಗಳ ಬಳಿಕ ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ಇತ್ತೀಚೆಗೆ ಈ ಕೃತ್ಯ ಎಸಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಸೇರಿದಂತೆ ಇನ್ನಿತರ ಸಾಕ್ಷ್ಯಾಧಾರಗಳನ್ನು ಪರಶೀಲಿಸಿದಾಗ ಟೈಲ್ಸ್ ಹಾಕಲು ಬಂದಿದ್ದ ಕಾರ್ಮಿಕರೇ ಕೃತ್ಯವೆಸಗಿರುವುದು ಖಚಿತವಾಗಿತ್ತು.  ಬಂಧನ ಭೀತಿಯಿಂದ ಆರೋಪಿಗಳು ಕಳ್ಳತನ ಮಾಡಿ ರಾಜಸ್ತಾನಕ್ಕೆ ಹೋಗಿದ್ದರು. ಅಲ್ಲದೆ ಬೆಳ್ಳಿ ಆಭರಣಗಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದ ರು. ಈ ಸಂಬಂಧಿಸಿದಂತೆ ಆದಿನಾಥ ಜೈನ ಮಂದಿರದ ಆಡಳಿತ ಮಂಡಳಿಯವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಅಶೋಕನಗರ ಪೊಲೀಸ್ ಇನ್ಸ್ ಪೆಕ್ಟರ್ ರವಿ ಕೆ.ಬಿ ನೇತೃತ್ವದ ತಂಡ ರಾಜಸ್ತಾನಕ್ಕೆ ತೆರಳಿ ನಾಲ್ವರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ ಎಂದು ಬಿ.ದಯಾನಂದ ವಿವಸಿರಿದರು.    