 ಡಾ. ಸಿರಿಯಕ್‌ ಅಬ್ಬಿ ಫಿಲಿಪ್ಸ್‌ (thewire.in)ಬೆಂಗಳೂರು: ‘ದಿ ಲಿವರ್‌ ಡಾಕ್ಟರ್‌’ ಎಂದೇ ಖ್ಯಾತರಾದ ಖ್ಯಾತ ಹೆಪಟಾಲಜಿಸ್ಟ್‌ ಡಾ. ಸಿರಿಯಕ್‌ ಅಬ್ಬಿ ಫಿಲಿಪ್ಸ್‌ ಅವರ ಟ್ವಿಟರ್‌ ಖಾತೆಯನ್ನು ಅಮಾನತುಗೊಳಿಸುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಮಾರ್ಪಡಿಸಿ ಅವರು ಫಾರ್ಮಾ ಕಂಪೆನಿ ಹಿಮಾಲಯ ವೆಲ್‌ನೆಸ್‌ ಕುರಿತಂತೆ ಮಾಡಿದ್ದಾರೆನ್ನಕಾದ ನಿಂದನಾತ್ಮಕ ಟ್ವೀಟ್‌ಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕುವುದಾಗಿ ಲಿಖಿತವಾಗಿ ತಿಳಿಸಿದಲ್ಲಿ ಅವರಿಗೆ ಅವರ ಖಾತೆಗೆ ಪ್ರವೇಶ ನೀಡಲಾಗುವುದು ಎಂದು ಹೇಳಿದೆ.ಅವರ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ ಪಿ ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ ನಂತರ ಸೆಪ್ಟೆಂಬರ್‌ 28ರಂದು ಫಿಲಿಪ್ಸ್ ಅವರ ಖಾತೆಯನ್ನು ಅಮಾನತುಗೊಳಿಸಿತ್ತು.  ಫಿಲಿಪ್ಸ್‌ ವಿರುದ್ಧ ಹಿಮಾಲಯ ವೆಲ್‌ನೆಸ್‌ ಮಾನಹಾನಿ ಪ್ರಕರಣ ದಾಖಲಿಸಿತ್ತಲ್ಲದೆ ಇತರ ಕಂಪೆನಿಗಳಾದ ಸಿಪ್ಲಾ ಮತ್ತು ಆಲ್ಕೆಮ್‌ ಇವುಗಳ ಉತ್ಪನ್ನಗಳ ಪ್ರಚಾರ ನಡೆಸುವ ಉದ್ದೇಶದೊಂದಿಗೆ ತನ್ನ ಕಂಪೆನಿಯ ಉತ್ಪನ್ನಗಳ ಕುರಿತಂತೆ ಸುಳ್ಳು ಮಾಹಿತಿ ನೀಡಿದ್ದಾರೆಂದು ಹಿಮಾಲಯ ವೆಲ್‌ನೆಸ್‌ ಆರೋಪಿಸಿತ್ತು.  ಹಿಮಾಲಯ ಉತ್ಪನ್ನಗಳಿಂದ ಪ್ರಯೋಜನ ಪಡೆಯುತ್ತಿರುವ ಗ್ರಾಹಕರಿಗೆ ಫಿಲಿಪ್ಸ್‌ ಅನ್ಯಾಯವೆಸಗಿದಂತಾಗುತ್ತದೆ ಎಂದು ವಿಚಾರಣಾ ನ್ಯಾಯಾಲಯ ಹೇಳಿತ್ತು.  ಇದನ್ನು ಪ್ರಶ್ನಿಸಿ ಫಿಲಿಪ್ಸ್‌ ಅವರು ಹೈಕೋರ್ಟ್‌ ಕದ ತಟ್ಟಿದ್ದರು.  ಮುಂದಿನ ವಿಚಾರಣೆ ನವೆಂಬರ್‌ ಎರಡನೇ ವಾರದಲ್ಲಿ ನಡೆಯಲಿದೆ.  