ಬೆಂಗಳೂರು, ಅ.5:ಶಿವಾಜಿ ನಗರದಲ್ಲಿರುವ ಪ್ರತಿಷ್ಠಿತ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಬೌರಿಂಗ್)ಯಲ್ಲಿ ಇತ್ತೀಚಿಗೆ ನಡೆದ ಪ್ರಾಧ್ಯಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಪಕರು ನೇರ ನೇಮಕಾತಿಯಲ್ಲಿ ಪ್ರಭಾವಿಗಳ ಮಕ್ಕಳನ್ನೆ ಆಯ್ಕೆ ಮಾಡಿದ್ದು, ಈ ಸಂಬಂಧ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ.ಹೆಚ್.ವಿ.ಮನೋಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.ನಗರದಲ್ಲಿಂದು ಬಹುಮಹಡಿ ಕಟ್ಟಡದ ಬಳಿಯಿರುವ ಲೋಕಾಯುಕ್ತ ಕೇಂದ್ರ ಕಚೇರಿಗೆ ಜನತಾ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ನೇತೃತ್ವದ ನಿಯೋಗವು ದೂರು ಸಲ್ಲಿಕೆ ಮಾಡಿದ್ದು,  2022-23ನೇ ಸಾಲಿನಲ್ಲಿ ಪ್ರಾಧ್ಯಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಪಕರು ನಡೆದಿರುವ ನೇರ ನೇಮಕಾತಿಯನ್ನೆ ರದ್ದುಗೊಳಿಸಿ, ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.  ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೇರ ನೇಮಕಾತಿ ಹೆಸರಿನಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದ 2022-23ನೇ ಸಾಲಿನ ಪ್ರಾಧ್ಯಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಪಕರು ನೇಮಕಾತಿಯಲ್ಲಿ ಭಾರೀ ಅವ್ಯವಹಾರ ಆಗಿದ್ದು, ಅರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು, ಪ್ರಭಾವಿಗಳು, ಹಾಗೂ ಲಂಚಕೊಟ್ಟಿರುವವರನ್ನು ಆಯ್ಕೆ ಮಾಡಿರುವ ದೂರುಗಳಿವೆ. ಈ ಸಂಬಂಧ ದಾಖಲೆ ಸಮೇತ ಲೋಕಾಯುಕ್ತಕ್ಕೆ ಸಲ್ಲಿಸಲಾಗಿದೆ ಎಂದರು.  ಒಟ್ಟು 58 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಿ, ತಮ್ಮ ಆಯ್ಕೆಯಂತೆ ಪ್ರಾಧ್ಯಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಪಕರನ್ನು ನೇಮಕ ಮಾಡಲಾಗಿದೆ. ಅದರಲ್ಲಿ ಬಹುಮುಖ್ಯವಾಗಿ ಇದುವರೆಗೂ 10 ಮಂದಿಗೆ ನೇಮಕ ಆದೇಶ ಕೈಗೆ ಸೇರದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.ಅಷ್ಟೇ ಅಲ್ಲದೆ, ತಮ್ಮ ಇಚ್ಛೆಯಂತೆ ಒಬ್ಬರಂತೆ ಪ್ರತ್ಯೇಕ ಆದೇಶ ನೀಡಲಾಗಿದೆ. ಈ ಸಂಬಂಧ ಗಂಭೀರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಮೀಸಲಾತಿ ಪಟ್ಟಿಯನ್ನು ಬದಲಾವಣೆ ಮಾಡಿದ್ದು, ಇದರಿಂದ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಇನ್ನೂ, 2022ನೇ ಸಾಲಿನ ಡಿಸೆಂಬರ್ 20 ಹಾಗೂ 22ರಂದು ನೇರ ನೇಮಕಾತಿ ಪಟ್ಟಿ ಬಿಡುಗಡೆಗೆ ಆದೇಶ ಮಾಡಲಾಗಿದ್ದರೂ ಸಹ ಜನವರಿಗೆ 4ರವರೆಗೂ ನೇಮಕಾತಿ ಬಹಿರಂಗವಾಗಿರಲಿಲ್ಲ. ಜತೆಗೆ, ಸಹಾಯ ಪ್ರಾಧ್ಯಾಪಕ ಹುದ್ದೆಯಲ್ಲಿ ಒಂದು ಸಾಮಾನ್ಯ ಪುರುಷ ಹುದ್ದೆಯಲ್ಲಿ ಮಹಿಳೆಗೆ ನೇಮಕಾತಿ ಮಾಡಲಾಗಿರುವುದು ದಾಖಲೆ ಸಮೇತ ಗೊತ್ತಾಗಿದೆ ಎಂದು ದೂರಿದರು.  ಸರ್ಕಾರ ಒಂದು ಸಮಿತಿ ರಚನೆ ಮಾಡಿದ್ದು, ಅದರ ಅಡಿಯಲ್ಲಿಯೇ ನೇರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರ ಅಧ್ಯಕ್ಷ ಬೆಂಗಳೂರಿನ ಸಂಜಯ್ ಗಾಂಧಿ ಇನ್‍ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ನ ನಿರ್ದೇಶಕ ಡಾ.ನಿರಂಜನ್ ಗೌಡ ಆಗಿದ್ದರು.   ಜೊತೆಗೆ, ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ.ಹೆಚ್.ವಿ.ಮನೋಜ್ ಕುಮಾರ್ ಸಹ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದ.ಇದನ್ನೆ ಬಂಡವಾಳ ಮಾಡಿಕೊಂಡು ತಮ್ಮ ಇಚ್ಛೆಯಂತೆ ನೇಮಕಾತಿ ಮಾಡಿರುವುದು ಗೊತ್ತಾಗಿದೆ ಎಂದು ನಾಗೇಶ್ ಹೇಳಿದರು.  ರಾಜ್ಯ ಸರ್ಕಾರ ಈ ಕೂಡಲೇ ನೇಮಕಾತಿ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ, ತನಿಖೆಗೆ ಒಪ್ಪಿಸಬೇಕು. ಅದೇ ರೀತಿ, ಬರೀ ಒಂದೇ ಹುದ್ದೆಗೆ ಆಕಾಂಕ್ಷಿಗಳಿಂದ 30ರಿಂದ 50 ಲಕ್ಷ ರೂಪಾಯಿವರೆಗೂ ಹಣ ಪಡೆದಿರುವ ಮಾತುಗಳು ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.  