ಮೈಸೂರು,ಅ.2: ಸರಕಾರದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.   ನಗರದ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಜಿಯರ್ಸ್‌ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳ 40 ಚೀಫ್ ಇಂಜಿನಿಯರ್ಸ್‌ ಪೈಕಿ 10 ಲಿಂಗಾ ಯತರು, 9 ಜನ ಒಕ್ಕಲಿಗರು, 4 ಜನ ಕುರುಬ ಸಮುದಾಯದ ಅಧಿಕಾರಿಗಳು ಇದ್ದಾರೆ. ಉಳಿದವರು ಎಲ್ಲಾ ಜಾತಿಗೆ ಸೇರಿದವರು. ರಾಜ್ಯದ 41 ವಿಶ್ವ ವಿದ್ಯಾನಿಲಯಗಳಲ್ಲಿ 14 ಜನ ಲಿಂಗಾಯತರು, 8 ಜನ ಬ್ರಾಹ್ಮಣರು ಕುಲಪತಿಗಳಾಗಿದ್ದಾರೆ. ಉಳಿದಂತೆ ಡಿಸಿ, ಎಸಿ, ವಿವಿಧ ಇಲಾಖೆಗಳ ಮುಖ್ಯಸ್ಥರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಮಾಹಿತಿ ಕೊರತೆಯಿಂದ ಕಾಂಗ್ರೆಸ್ ಹಿರಿಯ ಮುಖಂಡ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದು, ಕಾರ್ಯಕರ್ತರಿಗೆ ಇದರಿಂದ ನೋವಾಗಿದೆ ಎಂದರು.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಕ್ಷಾಂತರ ಕಾರ್ಯಕರ್ತರು ರಕ್ತ ಸುರಿಸಿದ್ದಾರೆ. ಸುಳ್ಳು ಕೇಸುಗಳನ್ನು ಹಾಕಿಸಿಕೊಂಡು ಜೈಲಿಗೆ ಹೋಗಿದ್ದಾರೆ. ಇವರ್ಯಾರಿಗೂ ಅಧಿಕಾರ ಸಿಕ್ಕಿಲ್ಲ, ಆದರೇ, ಅಧಿಕಾರ ಸಿಕ್ಕಿದವರು ವಿನಾಕಾರಣ ಸಿಎಂ ಮತ್ತು ಡಿಸಿಎಂ ವಿರುದ್ಧ ಹೊಟ್ಟೆ ಕಿಚ್ಚಿನಿಂದ ಆರೋಪ ಮಾಡುತ್ತಿರುವುದು ಸರಿಯಲ್ಲ. ಇವರ ಹೊಟ್ಟೆ ನೋವಿಗೆ ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ ಎಂದರು.  ʼʼನಾನು ಸಾಕಷ್ಟು ದಾಖಲೆಗಳನ್ನ ತೆಗೆದುಕೊಂಡಿದ್ದೇನೆ. ರಾಜ್ಯದಲ್ಲಿ 272 ಐಎಎಸ್ ಅಧಿಕಾರಿಗಳಿದ್ದಾರೆ. 87 ಜನ ಕರ್ನಾಟಕದ ಕೇಡರ್ ಗಳಿದ್ದಾರೆ. ಉಳಿದವರು ಬೇರೆ ರಾಜ್ಯದವರು. 87 ಜನರ ಪೈಕಿ 22ಜನರು ಲಿಂಗಾಯತರು ಇದ್ದಾರೆ. 31 ಜಿಲ್ಲಾಧಿಕಾರಿಗಳ ಪೈಕಿ 4 ಲಿಂಗಾಯತರು, 5 ಜನ ಒಕ್ಕಲಿಗರಿದ್ದಾರೆ. ಸಿಇಒಗಳು ಪೈಕಿ 10 ಜನ ಲಿಂಗಾಯತರಿದ್ದಾರೆ, 9 ಒಕ್ಕಲಿಗರಿದ್ದಾರೆ. 409 ಜನ ಕೆಎಸ್ ಅಧಿಕಾರಿಗಳಿದ್ದಾರೆ. ಇದರಲ್ಲಿ ‌102 ಜನರು ಲಿಂಗಾಯರಿದ್ದಾರೆ. ಕುರುಬರು ಮೂವರಿದ್ದಾರೆ. ಜಾತಿ ಆಧಾರದ ಮೇಲೆ ಹುದ್ದೆ ಕೊಡುವುದಲ್ಲ. ಯಾವುದೇ ಜಾತಿಯನ್ನ ಕಡೆಗಣನೆ ಮಾಡಿಲ್ಲʼʼ ಎಂದು ಹೇಳುವ ಮೂಲಕ ಕುರುಬರಿಗೆ ಎಲ್ಲಾ ಕೊಡುತ್ತಿದ್ದಾರೆ ಎಂಬ ಮಾತಿಗೆ ಉದಾಹರಣೆ ಕೊಟ್ಟರು.  ʼʼಸರ್ಕಾರದಿಂದ ನಾನು ದಾಖಲೆಗಳನ್ನ ತೆಗೆದುಕೊಂಡಿದ್ದೇನೆ. ಹೌಸಿಂಗ್ ಬೋರ್ಡ್, ಕ್ರಡೆಲ್ ಎಂಡಿ, ಅಗ್ರಿಕಲ್ಚರ್, ಚೆಸ್ಕಾಂ, ಐಟಿ ಬಿಟಿಯಲ್ಲಿ ಲಿಂಗಾಯತರಿದ್ದಾರೆ. ಪ್ರತಿಯೊಂದು ಜಾತಿಯನ್ನ ಒಟ್ಟಿಗೆ ತೆಗೆದುಕೊಂಡು ಹೋಗಿದ್ರೆ ಅದು ಕಾಂಗ್ರೆಸ್ ಮಾತ್ರ. ಕೈ ಮುಗಿದು ಕೇಳಿ ಕೊಳ್ತೇನೆ, ಚುನಾವಣೆ ಸಂದರ್ಭದಲ್ಲಿ ನೀವೆಲ್ಲಾ ಎಲ್ಲಿ ಇದ್ರಿ. ಖುಷಿ, ತೆವಲು ತೀಟೆಗೆ ಕೆಲವರು ಹೇಳಿಕೆ ಕೊಡುತ್ತಿದ್ದಾರೆ ʼʼ ಎಂದು ಪರೋಕ್ಷವಾಗಿ ಶಾಮನೂರು ಶಿವಶಂಕರಪ್ಪನವರ ವಿರುದ್ಧ ಬೇಸರ ವ್ಯಕ್ತಪಡಿಸಿದರು.  ಶಾಮನೂರು ಶಿವಶಂಕರಪ್ಪನವರಿಗೆ ದಾಖಲೆಗಳನ್ನ ಕಳುಹಿಸಿಕೊಡುತ್ತೇನೆ. ಅವರನ್ನ ಭೇಟಿ ಮಾಡಿ ಮಾಹಿತಿ ಕೊಡುತ್ತೇನೆ. ಜಾತಿ ರಾಜಕಾರಣವನ್ನ ಸಿದ್ದರಾಮಯ್ಯ ಜೀವನದಲ್ಲಿ ಮಾಡಿಲ್ಲ. ಕುರುಬರೇ ಸರ್ಕಾರ ನಡೆಸುತ್ತಿದ್ದಾರೆ ಎನ್ನುವುದು ತಪ್ಪು‌. ಜಾತಿ ಜಾತಿಗಳ ನಡುವೆ ಜಗಳ ತರುವುದು ಬಿಜೆಪಿ ಕೆಲಸ. ಶಾಮನೂರು ಶಿವಶಂಕರಪ್ಪನವರಿಗೆ ಯಾರು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯ ನಮ್ಮನ್ನ ಕೈಹಿಡಿದಿದೆ. ಒಕ್ಕಲಿಗರು ಸೇರಿದಂತೆ ಎಲ್ಲರೂ ಕೈ ಹಿಡಿದಿದ್ದಾರೆ. ಸರ್ಕಾರದಲ್ಲಿ 7 ಜನ ಲಿಂಗಾಯತ ಮಂತ್ರಿಗಳಿದ್ದಾರೆ ಎಂದು ಎಂ.ಲಕ್ಷ್ಮಣ್ ಸ್ಪಷ್ಟನೆ ನೀಡಿದರು.