ಬೆಂಗಳೂರು, ಅ.1: ರಾಜ್ಯ ಸರಕಾರವು ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದ್ದು, ಜೆಎನ್‍ಯುನ ನಿವೃತ್ತ ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ, ಡಾ.ಎಚ್.ಎಲ್.ಪುಷ್ಪಾ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಸಮಿತಿಯ ಸದ್ಯರಾಗಿ ನೇಮಕ ಮಾಡಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಸಮಿತಿಯ ಅಧ್ಯಕ್ಷರಾಗಿದ್ದು, ಇಲಾಖೆಯ ಕಾರ್ಯದರ್ಶಿ ಸೇರಿ ಸಾಹಿತ್ಯ, ಜನಪದ ಮತ್ತಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 30 ಮಂದಿ ಸದಸ್ಯರಾಗಿದ್ದಾರೆ. ಇಲಾಖೆಯ ವ್ಯಾಪ್ತಿಯಲ್ಲಿರುವ ಏಳು ಅಕಾಡೆಮಿಗಳ ಅಧ್ಯಕ್ಷರು ಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದು, ಇಲಾಖೆಯ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.  ಸಾಹಿತ್ಯ ಕ್ಷೇತದಲ್ಲಿ ಜಾಣಗೆರೆ ವೆಂಕಟರಾಮಯ್ಯ, ಡಾ.ವೀರಣ್ಣ ದಂಡೆ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ ಸದಸ್ಯರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸಿ.ಆರ್.ಚಂದ್ರಶೇಖರ್, ಜನಪದ ಕ್ಷೇತ್ರದಲ್ಲಿ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಡಾ.ಕೃಷ್ಣಮೂರ್ತಿ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್ ಸಮಿತಿಯ ಸದಸ್ಯರಾಗಿದ್ದಾರೆ.   ಕೃಷಿ ವಿಭಾಗದಲ್ಲಿ ಡಾ.ವಿಠಲ್ ಐ.ಬೆಣಗಿ, ಸಮಾಜ ಸೇವಾ ಕ್ಷೇತ್ರದಲ್ಲಿ ಡಾ.ಸಣ್ಣರಾಮು, ಶಿಲ್ಪಕಲೆಯಲ್ಲಿ ವೆಂಕಟರಮಣಯ್ಯ, ಚಿತ್ರಕಲೆಯಲ್ಲಿ ಡಾ.ಎಂ.ಎಸ್.ಮೂರ್ತಿ, ಚಲನಚಿತ್ರ ಕ್ಷೇತ್ರದಲ್ಲಿ ಸಾಧುಕೋಕಿಲ, ಕ್ರೀಡೆಯಲ್ಲಿ ರೀತು ಅಬ್ರಹಾಂ, ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಫಯ್ಯಾಜ್ ಖಾನ್ ಸಮಿತಿಯ ಸದಸ್ಯರಾಗಿದ್ದಾರೆ.    ಶಿಕ್ಷಣದಲ್ಲಿ ಪುರುಷೋತ್ತಮ ಬಿಳಿಮಲೆ, ಆಡಳಿತದಲ್ಲಿ ನಿವೃತ್ತ ಅಧಿಕಾರಿ ಡಿ.ಎನ್.ನರಸಿಂಹರಾಜು, ಪ್ರಕಾಶಕರಲ್ಲಿ ಚನ್ನಬಸವಣ್ಣ, ಪತ್ರಿಕೋದ್ಯಮದಲ್ಲಿ ಶೈಲೇಶ್ ಚಂದ್ರಗುಪ್ತ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಜೆ. ಲೋಕೇಶ್ ಸಮಿತಿಯ ಸದಸ್ಯರಾಗಿದ್ದಾರೆ.   ಇನ್ನು ಕನ್ನಡ ಸಾಹಿತ್ಯ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಲಲಿತಾ ಕಲಾ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಮತ್ತು ಜಾನಪದ ಅಕಾಡೆಮಿಯ ಅಧ್ಯಕ್ಷರು ಸಮಿತಿಯ ಪದನಿಮಿತ್ತ ಸದಸ್ಯರನ್ನಾಗಿ ಸರಕಾರ ನೇಮಕ ಮಾಡಿದೆ.    