ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿರುವ ನಟ ನಾಗಭೂಷಣ್​ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಕೋಣನಕುಂಟೆ ಕ್ರಾಸ್​ ಬಳಿ ನಡೆದಿದೆ.ಮೃತ ಮಹಿಳೆಯನ್ನು ಪ್ರೇಮಾ​ ಎಸ್​( 48) ಎಂದು ಗುರುತಿಸಲಾಗಿದೆ. ಫುಟ್​ ಪಾತ್​ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ನಾಗಭೂಷಣ್​ ಅವರ ಕಾರು ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ  ಪ್ರೇಮಾ ಅವರ ಪತಿ ಕೃಷ್ಣ ಬಿ. ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪ್ರೇಮಾ ಮತ್ತು ಕೃಷ್ಣ ದಂಪತಿಯ ಪುತ್ರ ಪಾರ್ಥ ಕೆ. ಅವರು ದೂರು ನೀಡಿದ್ದಾರೆ. ಕುಮಾರಸ್ವಾಮಿ ಲೇಔಟ್​ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಿಸಲಾಗಿದೆ.