ಬೆಂಗಳೂರು, ಸೆ.30: ರಾಜಧಾನಿ ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಎಸಗಿದ್ದ ಪ್ರಕರಣದ ಜಾಲವನ್ನು ಪತ್ತೆ ಹಚ್ಚಿರುವ ನಗರ ಸಿಸಿಬಿ ಪೊಲೀಸರು, ಆರು ಮಂದಿಯನ್ನು ಬಂಧಿಸಿ, 5 ಕೋಟಿ ರೂ.ಗಳನ್ನು ಜಪ್ತಿ ಮಾಡಿದ್ದಾರೆ.ಶನಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಬ್ಯಾಂಕ್ ಖಾತೆ ತೆರೆದು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಟೆಲಿಗ್ರಾಮ್ ಆ್ಯಪ್‍ಗಳ ಮೂಲಕ ಅಮಾಯಕ ಜನರನ್ನು ಸಂಪರ್ಕಿಸಿ ಕಡಿಮೆ ಹಣ ಹೂಡಿಕೆಗೆ ಲಕ್ಷಾಂತರ ರೂ. ಲಾಭ ನೀಡುವುದಾಗಿ ನಂಬಿಸಲಾಗಿದ್ದು, ಈ ಸಂಬಂಧ ದೇಶಾದ್ಯಂತ 84 ಬ್ಯಾಂಕ್ ಖಾತೆಗಳಲ್ಲಿ 854 ಕೋಟಿ ರೂ. ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.  ವಿದೇಶದಲ್ಲಿದ್ದುಕೊಂಡು ಬೆಂಗಳೂರಿನಿಂದ ಬ್ಯಾಂಕ್ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ ಜಾಲಕ್ಕೆ ಸಹಕಾರ ಮಾಡುತ್ತಿದ್ದ ಬೆಂಗಳೂರಿನ ಆರೋಪಿಗಳಾದ ಮನೋಜ್ ಯಾನೆ ಜಾಕ್, ಫಣೀಂದ್ರ, ವಸಂತ್, ಶ್ರೀನಿವಾಸ, ಚಕ್ರಾದರ್ ಯಾನೆ ಚಕ್ರಿ, ಸೋಮಶೇಖರ್ ಯಾನೆ ಅಂಕಲ್ ಎಂಬುವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.  ನಗರದ ವಿದ್ಯಾರಣ್ಯಪುರ, ಯಲಹಂಕ ಭಾಗದಲ್ಲಿ ವಾಸವಾಗಿದ್ದ ಬಂಧಿತ ಆರೋಪಿಗಳು, ವಿದೇಶದಿಂದ ಬರುವ ಆದೇಶದಂತೆ ಬ್ಯಾಂಕ್ ಖಾತೆಗಳನ್ನು ನಿರ್ವಹಣೆ ಮಾಡುತ್ತಿರುವುದು ಪತ್ತೆಯಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ವಿವಿಧ ಕಂಪೆನಿಯ 14 ಮೊಬೈಲ್‍ಗಳು, 7 ಲ್ಯಾಪ್‍ಟಾಪ್‍ಗಳು, 1 ಪ್ರಿಂಟರ್, ಸ್ಕೈಪಿಂಗ್ ಮಷಿನ್, ಹಾರ್ಡ್ ಡಿಸ್ಕ್, ಹಲವಾರು ಬ್ಯಾಂಕ್ ಪಾಸ್‍ಬುಕ್‍ಗಳು ಇತರೇ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಬಿ.ದಯಾನಂದ ತಿಳಿಸಿದರು.  ಎ.28ರಂದು ನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರಿಗೆ ಲೋನ್ ಆ್ಯಪ್ ಮೂಲಕ ಹಂತ ಹಂತವಾಗಿ 8.50 ಲಕ್ಷ ರೂ. ಪಡೆದುಕೊಂಡು ವಂಚಿಸಿದ ಪ್ರಕರಣ ದಾಖಲಾಗಿತ್ತು.   ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡ ಸೈಬರ್ ಕ್ರೈಮ್ ಅಧಿಕಾರಿಗಳು, ವಿವಿಧ ಬ್ಯಾಂಕ್‍ಗಳ ಖಾತೆಗಳಿಗೆ ಹಣವು ವರ್ಗಾವಣೆಯಾಗಿರುವುದು ಕಂಡು ಬಂದು ಪ್ರಕರಣದಲ್ಲಿ ಬಳಕೆಯಾಗಿರುವ ಬ್ಯಾಂಕ್ ಖಾತೆಗಳ ಖಾತೆದಾರರ ವಿವರಗಳನ್ನು ಪಡೆದುಕೊಂಡು ನಂತರ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್ ಖಾತೆ ತೆರೆದು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಆ್ಯಪ್‍ಗಳ ಮೂಲಕ ಅಮಾಯಕರನ್ನು ಸಂಪರ್ಕಿಸಿ ಅವರಿಂದ ಕಡಿಮೆ ಹಣವನ್ನು ಹೂಡಿಕೆ ಮಾಡಿ ಲಕ್ಷಾಂತರ ರೂ.ಗಳನ್ನು ಕೊಡುವುದಾಗಿ ನಂಬಿಸಿ, ವಂಚಿಸಿರುವುದು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಬಿ.ದಯಾನಂದ ತಿಳಿಸಿದರು.  17 ಮಂದಿಗೆ ವಂಚನೆ: ಬ್ಯಾಂಕ್ ಆ್ಯಪ್ ಮೂಲಕ ವಂಚನೆಗೊಳಗಾದವರಲ್ಲಿ ಬೆಂಗಳೂರಿನ 17 ವ್ಯಕ್ತಿಗಳಿದ್ದು, ಸೈಬರ್ ಪೆÇಲೀಸ್ ಠಾಣೆಯಲ್ಲಿ 2 ಪ್ರಕರಣಗಳು, ಆಗ್ನೇಯ ವಿಭಾಗದಲ್ಲಿ 3 ಪ್ರಕರಣಗಳು, ಈಶಾನ್ಯ ವಿಭಾಗದಲ್ಲಿ 4 ಪ್ರಕರಣಗಳು ಮತ್ತು ಉತ್ತರ ವಿಭಾಗದಲ್ಲಿ 4 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಈ ಪ್ರಕರಣ ಸಂಬಂಧ ಆಂಧ್ರ ಪ್ರದೇಶದಲ್ಲಿ 296, ಬಿಹಾರದಲ್ಲಿ 200, ದಿಲ್ಲಿಯಲ್ಲಿ 194, ಗುಜರಾತ್‍ನಲ್ಲಿ 642 ಹಾಗೂ ಮಹಾರಾಷ್ಟ್ರದಲ್ಲಿ 332 ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು 5013 ದೂರುಗಳು ದಾಖಲಾಗಿವೆ ಎಂದು ಬಿ.ದಯಾನಂದ ಹೇಳಿದರು.