ಬೆಂಗಳೂರು: ʼಬ್ಯಾರಿ ಮುಸ್ಲಿಂ ಸಮುದಾಯ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಸರಕಾರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆದರೆ ನಮ್ಮ ನಿರೀಕ್ಷೆಯಷ್ಟು ಸಚಿವ ಸ್ಥಾನವನ್ನು ಈ ಸರಕಾರದಲ್ಲಿ ನೀಡಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಯು.ಟಿ.ಖಾದರ್ ಸಹಿತ ಮೂರು ಮಂದಿಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೆ ವಿಧಾನ ಪರಿಷತ್‍ನಲ್ಲಿ ಮುಸ್ಲಿಮರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕುʼ ಎಂದು‌ ಬ್ಯಾರೀಸ್ ಗ್ರೂಪ್ ಹಾಗೂ ʼಬ್ಯಾರೀಸ್ ಸೌಹಾರ್ದ ಭವನʼ ಕಟ್ಟಡ ಸಮಿತಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಆಗ್ರಹಿಸಿದ್ದಾರೆ.ಶನಿವಾರ ನಗರದ ಎಚ್.ಬಿ.ಆರ್.ಲೇಔಟ್‌ನಲ್ಲಿ ದಿ ಬ್ಯಾರೀಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ ಬ್ಯಾರೀಸ್ ಸೌಹಾರ್ದ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ʼʼರಾಜ್ಯ ಸರಕಾರವು ಈ ಹಿಂದೆ ನಮಗೆ 30 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನ ಮಂಜೂರು ಮಾಡಿತ್ತು. ಆದರೆ, ಕಾರಣಾಂತರಗಳಿಂದ ನಮಗೆ ಲಭ್ಯವಾಗಿದ್ದು 12 ಸಾವಿರ ಚ.ಅ. ಮಾತ್ರ. ಅದನ್ನು ಈ ಭವನ ನಿರ್ಮಾಣಕ್ಕೆ ಸಂಪೂರ್ಣವಾಗಿ ಬಳಕೆ ಮಾಡಿಕೊಂಡಿದ್ದೇವೆʼʼ ಎಂದು ತಿಳಿಸಿದರು.ʼʼಬಾಕಿ ಉಳಿದಿರುವ 18 ಸಾವಿರ ಚ.ಅ. ಜಮೀನನ್ನು ಬೆಂಗಳೂರಿನಲ್ಲಿ ನೀಡಿದರೆ, ಇದೇ ಮಾದರಿ ಅಲ್ಲಿ ಮತ್ತೊಂದು ಭವನ ನಿರ್ಮಾಣ ಮಾಡಿ, ಪುರುಷರಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುವುದು. ಇದಕ್ಕೆ ಸರಕಾರದಿಂದ ಅಗತ್ಯ ಅನುದಾನವನ್ನು ಮಂಜೂರು ಮಾಡಬೇಕುʼʼ ಎಂದು ಅವರು ಮನವಿ ಮಾಡಿದರು.ʼʼಬಿ.ಎ.ಮೊಯ್ದೀನ್ ಅವರ ಕನಸಿನಂತೆ ಈ ಭವನ ನಿರ್ಮಾಣವಾಗಿದೆ. ಅವರೇ ಸೂಚಿಸಿದಂತೆ ‘ಬ್ಯಾರಿ ಸೌಹಾರ್ದ ಭವನ’ ಎಂಬ ಹೆಸರನ್ನು ಈ ಭವನಕ್ಕೆ ಇಡಲಾಗಿದೆ. ಬ್ಯಾರಿ ಮುಸ್ಲಿಮರಲ್ಲಿ ಶೈಕ್ಷಣಿಕ ಕ್ರಾಂತಿ ಸೃಷ್ಟಿಸಿದ ಬಿ.ಎ.ಮೊಯ್ದೀನ್ ಅವರು ಬಯಸಿದಂತೆ ಇದು ಸಮುದಾಯದ ಒಳಿತಿನ ಭವನವಾಗಲಿದೆʼʼ ಎಂದು ಸೈಯದ್ ಬ್ಯಾರಿ ಹೇಳಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾರಿ ಸೌಹಾರ್ದ ಭವನ ಕಟ್ಟಡ ಸಮಿತಿಯ ಸದಸ್ಯ ಉಮರ್ ಟೀಕೆ, ಬ್ಯಾರಿ ಮುಸ್ಲಿಮರ ಬಹುಕಾಲದ ಕನಸು ಇಂದು ನನಸಾಗುತ್ತಿವೆ. ಉದ್ಯೋಗ, ಕೆಲಸ ಅರಸಿಕೊಂಡು ಕರಾವಳಿಯಿಂದ ಬೆಂಗಳೂರಿಗೆ ಬಂದ ಬ್ಯಾರಿ ಮುಸ್ಲಿಮರು ಬ್ಯಾರಿ ಎಂಬ ತನ್ನ ಅನನ್ಯ ಗುರುತನ್ನು ದೌಬಲ್ರ್ಯ ಎಂದು ಬಗೆಯದೆ ಅದನ್ನು ಸಾಮಥ್ರ್ಯವಾಗಿರಿಸಿದುದರ ಫಲವಾಗಿ ಇಂದು ಬ್ಯಾರಿ ಸಂಘಟನೆಗಳು, ಬ್ಯಾರಿ ಸಾಹಿತ್ಯ ಸಮ್ಮೇಳನಗಳು, ಬ್ಯಾರಿ ಸಾಹಿತ್ಯ ಅಕಾಡೆಮಿ, ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಯಾಗಲು ಕಾರಣವಾಗಿವೆ. ಇದೀಗ ಬ್ಯಾರಿ ಸೌಹಾರ್ದ ಭವನ ತಲೆ ಎತ್ತುವ ಮೂಲಕ ಬ್ಯಾರಿ ಮುಸ್ಲಿಮರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.      