ಬೆಂಗಳೂರು: ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಈಗಾಗಲೇ 3,150 ಕೋ.ರೂ. ಮೀಸಲಿಡಲಾಗಿದೆ. ಮುಂದಿನ ಬಜೆಟ್‌ಗಳಲ್ಲಿ ಹಂತಹಂತವಾಗಿ 10 ಸಾವಿರ ಕೋ.ರೂ. ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಸಂಪತ್ತನ್ನು ಸಮಾನವಾಗಿ ಹಂಚಲಾಗುವುದು. ಸಮಾನ ನ್ಯಾಯ ಕಲ್ಪಿಸಲಾಗುವುದು. ಯಾರಿಗೂ ಅನ್ಯಾಯವಾಗಲು ಬಿಡಲಾರೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಲಾರೆ ಎಂದರು.ಬ್ಯಾರಿ ಸೌಹಾರ್ದ ಭವನಕ್ಕೆ ಅಂದು ಶಿಲಾನ್ಯಾಸ‌ ನೆರವೇರಿಸುವ ಮತ್ತು ‌ಇಂದು ಭವನ ಉದ್ಘಾಟಿಸುವ ಭಾಗ್ಯ ನನಗೆ ಸಿಕ್ಕಿರುವುದು ಹೆಮ್ಮೆಯ ವಿಚಾರ. ಈ ಭವನ ಬ್ಯಾರಿ ಮುಸ್ಲಿಮರಿಗೆ ಮಾತ್ರ ಸೀಮಿತಗೊಳಿಸದೆ ಎಲ್ಲರಿಗೂ ಅವಕಾಶ ನೀಡುತ್ತಿರುವುದು ಅಭಿನಂದನಾರ್ಹ ಎಂದರು.ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇಂಧನ ಖಾತೆಯ ಸಚಿವ ಕೆ.ಜೆ. ಜಾರ್ಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್‌ನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಬ್ಯಾರಿ ಸೌಹಾರ್ದ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಂ. ಫಾರೂಕ್, ಉಮರ್ ಟಿ.ಕೆ. ಭಾಗವಹಿಸಿದ್ದರು. 