ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಅಮಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼʼದೆಹಲಿಗೆ ಹೋಗುವಾಗ ನನ್ನನ್ನು ಬಿಟ್ಟು ಹೋಗಿದ್ದಾರೆ. ಇದು ನನಗೆ ನೋವಾಗಿದೆ. ಇವರು ಬಿಜೆಪಿ ಹತ್ತಿರ ಹೋಗಿದ್ದು ತಪ್ಪು. ಅವರೇ ದೇವೇಗೌಡರ ಮನೆ ಬಳಿಗೆ ಬರಬೇಕಾಗಿತ್ತು. ಪಕ್ಷದ ಕಾರ್ಯಕರ್ತರ ಮುಂದೆ ತಲೆ ತಗ್ಗಿಸೋ ಪರಿಸ್ಥಿತಿ ಬಂತುʼʼ ಎಂದು ಅಸಮಾಧಾನ ಹೊರಹಾಕಿದರು. ʼʼನಾನೊಂದು ಪಕ್ಷದ ಅಧ್ಯಕ್ಷ. ನೀವು ದೆಹಲಿಗೆ ಹೋದಿರಿ, ನನಗೆ ಒಂದು ಮಾತು ಹೇಳಿಲ್ಲ. ಏನು ಚರ್ಚೆ ಮಾಡಿದ್ದೀರಿ, ಈವರೆಗೆ ಮಾಹಿತಿ ಬಂದಿಲ್ಲ. ಮೈತ್ರಿ ಎಲ್ಲಿ ಆಗಿದೆ? ನಾನು ಪಕ್ಷದ ಅಧ್ಯಕ್ಷ, ಪಕ್ಷದಲ್ಲಿ ಎಲ್ಲಿ ಚರ್ಚೆ ಆಗಿದೆ?ʼʼ ಎಂದು ಕುಮಾಸ್ವಾಮಿ ಅವರನ್ನು  ಪ್ರಶ್ನಿಸಿದರು. ʼʼಜನತಾದಳದ ಮೂಲ ಮತಗಳು ಈ ಬಾರಿ ಕಾಂಗ್ರೆಸ್​ಗೆ ಹೋಗಿದೆ. ಅದನ್ನು ಒಪ್ಪಲು ತಯಾರಿಲ್ಲ, ಅದನ್ನು ಒಪ್ಪಿಕೊಳ್ಳಿ. ಪಕ್ಷದಲ್ಲಿ ಚರ್ಚೆ ಆಗಿ ನಿರ್ಣಯ ಆದ ಮೇಲೆ ರಾಜ್ಯಾಧ್ಯಕ್ಷನಾಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಪ್ರವಾಸ ಶುರು ಮಾಡಿಲ್ಲ, ಆಗಲೇ ಹೋಗಿ ಭೇಟಿ ಮಾಡಿ ಬಂದಿದ್ದಾರೆʼʼ ಎಂದು ಕುಮಾರಸ್ವಾಮಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ʼʼಅಕ್ಟೋಬರ್ 16ರ ಸಭೆಯ ಬಳಿಕ ಪಕ್ಷದ ವರಿಷ್ಠ ಎಚ್.​​ಡಿ ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡುತ್ತೇನೆ. ಶರದ್ ಪವಾರ್ ಸೇರಿದಂತೆ ಹಲವರು ಮತ್ತು ದೆಹಲಿಯಿಂದ ಕಾಂಗ್ರೆಸ್ ನಾಯಕರು ಮಾತಾಡಿದ್ದಾರೆ. ಸಿದ್ದರಾಮಯ್ಯ ಜೊತೆ ಏನೂ ಮಾತುಕತೆ ಮಾಡಿಲ್ಲ. ಅಕ್ಟೋಬರ್ 16ರ ಬಳಿಕ ಗಟ್ಟಿ ನಿರರ್ಧಾರ ಕೈಗೊಳ್ಳುತ್ತೇನೆ ʼʼ ಎಂದು ಸ್ಪಷ್ಟಪಡಿಸಿದರು. ʼʼನನಗೆ ಸ್ಥಾನ ಮುಖ್ಯ ಅಲ್ಲ, ಮಾನ ಮುಖ್ಯʼʼʼʼನನಗೆ ಸ್ಥಾನ ಮುಖ್ಯ ಅಲ್ಲ, ಮಾನ ಮುಖ್ಯ. 60 ವರ್ಷದ ರಾಜಕೀಯದಲ್ಲಿ ಕಳಂಕ ನನ್ನ ಮೇಲೆ ಇಲ್ಲ. ಮೈತ್ರಿ ಬೇಕಾಗಿಲ್ಲ ಅಂತ ಅವತ್ತು ದೇವೇಗೌಡರು ಹೇಳಿದ್ದರು. ದೇವೇಗೌಡರು ಹೋಗಿ ಮೈತ್ರಿ ಬಗ್ಗೆ ಮಾತಾಡಿಲ್ಲ, ಕುಮಾರಸ್ವಾಮಿ ಹೋಗುವಾಗ ನನಗೆ ತಿಳಿಸಿಲ್ಲ. ಜನತಾದಳ ಹಿಂದೂ ಪಕ್ಷವೂ ಅಲ್ಲ, ಮುಸ್ಲಿಂ ಪಕ್ಷವೂ ಅಲ್ಲ. ಜನತಾದಳ ಕನ್ನಡದ ಪಕ್ಷʼʼ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು. 