Photo: PTIಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಮಧ್ಯಾಹ್ನ ಟೇಕಾಫ್ ಆದ ಎರಡು ಇಂಡಿಗೊ ವಿಮಾನಗಳಿಗೆ ಡ್ರೋಣ್ ಹಾರಾಟ ಅಪಾಯ ತಂದೊಡ್ಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಡ್ರೋಣ್ ವಿಮಾನಗಳಿಗೆ ಅಪಾಯಕಾರಿ ಎನ್ನುವಷ್ಟು ಸನಿಹಕ್ಕೆ ಬಂದಿದ್ದು, ವಾಯುಸಂಚಾರ ಸುರಕ್ಷತೆಯ ಅಪಾಯ ತಂದೊಡ್ಡಿದೆ.ಎರಡೂ ವಿಮಾನಗಳ ಪೈಲಟ್ ಗಳು ವಾಯು ಸಂಚಾರ ನಿಯಂತ್ರಣ (ಎಟಿಸಿ) ವಿಭಾಗಕ್ಕೆ ಈ ಬಗ್ಗೆ ಮಾಹಿತಿ ನೀಡಿದರು. ನಿರ್ಬಂಧಿತ ವಾಯುಪ್ರದೇಶದಲ್ಲಿ ಈ ಡ್ರೋಣ್ ಹಾರಿಸಿದ ಆಪರೇಟರ್ ಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.ಪೈಲಟ್ ತಕ್ಷಣವೇ ಎಟಿಸಿಗೆ ಮಾಹಿತಿ ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಕೆಐಎ ಅಧಿಕಾರಿಗಳು ಹೇಳಿದ್ದಾರೆ. ಒಂದು ವಿಮಾನಕ್ಕೆ ಈ ಅಪಾಯ ಎದುರಾದ ಬಳಿಕ ಟೇಕಾಫ್ ಆದ ಮತ್ತೊಂದು ವಿಮಾನಕ್ಕೂ ಇದೇ ಪರಿಸ್ಥಿತಿ ಎದುರಾಯಿತು ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಎಟಿಸಿ ಅಧಿಕಾರಿಗಳು ಈ ಘಟನೆಯನ್ನು ವಿಮಾನ ನಿಲ್ದಾಣ ಕಾರ್ಯಾಚರಣೆಗಳ ನಿಯಂತ್ರಣ ಕೇಂದ್ರಕ್ಕೆ ವಿವರಿಸಿದ್ದು, ಈ ಕೇಂದ್ರ ತನಿಖೆ ಆರಂಭಿಸಿದೆ. ಇದು ಯಾವ ಬಗೆಯ ಸಾಧನ ಎನ್ನುವುದನ್ನು ಪರಿಶೀಲನೆ ಮಾಡಲು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಲಾಗುತ್ತಿದೆ. ಜತೆಗೆ ಇದು ಯಾವ ದಿಕ್ಕಿನಿಂದ ಬಂದಿದೆ ಹಾಗೂ ಎರಡೂ ವಿಮಾನಗಳ ಎಷ್ಟು ಸನಿಹಕ್ಕೆ ಈ ಡ್ರೋಣ್ ಬಂದಿದೆ ಎನ್ನುವುದನ್ನೂ ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.  