ಮೈಸೂರು: ʼʼಕಾವೇರಿ ವಿಚಾರದಲ್ಲಿ ನಿಮ್ಮ ಕಣ್ಣಿಗೆ ನಾವು ನಾಲ್ಕು ಮಂದಿ ಮಾತ್ರ ಕಾಣುವುದಾ? ಬೇರೆ ಯಾರೂ ಕಾಣುವುದಿಲ್ಲವೇ?ʼʼ ಎಂದು ನಟ ದರ್ಶನ್ ತೂಗುದೀಪ​ ಪ್ರಶ್ನಿಸಿದ್ದಾರೆ.ಬಂಡೂರು ಪಟ್ಟಣದಲ್ಲಿ ರವಿವಾರ ಗಂಗಾ ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ನೈಸರ್ಗಿಕ ಕೃಷಿಕರಿಗೆ 100 ಹಳ್ಳಿಕಾರ್ ತಳಿಯ ಗೋದಾನ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.ʼʼಕಾವೇರಿ ಹೋರಾಟ ಬಂದಾಗಲೆಲ್ಲಾ  ದರ್ಶನ್, ಸುದೀಪ್, ಶಿವಣ್ಣ, ಯಶ್ ಮತ್ತೊಬ್ಬರು ಮಾತ್ರ ಕಾಣಿಸೋದಾ?ʼʼ ಎಂದು ಬೇಸರ ವ್ಯಕ್ತಪಡಿಸಿದರು. ಸುಮಾರು ದಿನಗಳಿಂದ ಈ ಕಲಾವಿದರು ಅದಕ್ಕೆ ಬಂದಿಲ್ಲ, ಆ  ಕಲಾವಿದರು ಇದಕ್ಕೆ ಬಂದಿಲ್ಲ ಅಂತ ಹೇಳ್ತಾ ಇದ್ದರಾಲ್ಲಾ ಸ್ವಾಮಿ; ಇತ್ತೀಚೆಗೆ ತಮಿಳು ಚಿತ್ರ ಒಂದು ಬಿಡುಗಡೆಯಾಯಿತು. ಆ ಚಿತ್ರವನ್ನು ವಿತರಕರೊಬ್ಬರು ಕರ್ನಾಟಕ‌ದಲ್ಲಿ ಹಂಚಿಕೆ ಮಾಡಲು 6 ಕೋಟಿಗೆ ಖರೀದಿ ಮಾಡಿದ, ಅದರಿಂದ ಸುಮಾರು 36 ರಿಂದ 37 ಕೋಟಿ ರೂಪಾಯಿ ಸಂಪಾದಿಸಿ, ತಮಿಳು ನಾಡಿಗೆ ಕೊಂಡೊಯ್ದ. ಏಕೆ ಅವರ ಬಳಿ ಕಾವೇರಿ ವಿಚಾರದ ಬಗ್ಗೆ ಒಂದು ಮಾತು ಕೇಳಿಲ್ಲ? ಅವರ ಬಾಯಿ ಬಂದ್‌ ಮಾಡಿ ಪೋಸ್ಟ್ರರ್‌ ಹಾಕಿಲ್ಲ? ಎಂದು ಪ್ರಶ್ನಿಸಿದ ಅವರು, ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದರು. 