ಬೆಂಗಳೂರು, ಸೆ.18: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 8 ಮನೆಗಳು ಭಸ್ಮವಾಗಿರುವ ಘಟನೆ ಇಲ್ಲಿನ  ಚಾಮರಾಜಪೇಟೆಯ ಅನಂತಪುರದ ಬಳಿ ನಡೆದಿದೆ.ಸಿಲಿಂಡರ್‌ ಸ್ಪೋಟದ ತೀವ್ರತೆಗೆ 8 ಶೀಟ್ ಮನೆಗಳು ಹಾನಿಗೊಳಗಾಗಿದ್ದು, ಈ ವೇಳೆ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.ಇನ್ನೂ, ಈ ಅವಘಡದಲ್ಲಿ ಗೋಧಾಮು ಸೇರಿದಂತೆ ಪಕ್ಕದಲ್ಲಿರುವ 8 ಮನೆಗಳಿಗೂ ಬೆಂಕಿ ತಗುಲಿದ್ದು, ಈ ವೇಳೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.ಘಟನೆ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, ಡೆಕೊರೇಶನ್ ವಸ್ತುಗಳ ಸಂಗ್ರಹವಿಟ್ಟಿದ್ದ ಗೋದಾಮಿನಲ್ಲಿ ಶಾರ್ಟ್‌ ಸರ್ಕೂಟ್‌ನಿಂದ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ಘಟನೆಯಲ್ಲಿ ಎರಡು ಗ್ಯಾಸ್ ಸಿಲಿಂಡರ್‌ಗೂ ಬೆಂಕಿ ತಗುಲಿ ಬೆಂಕಿ ಇನ್ನಷ್ಟು ವ್ಯಾಪಿಸಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.