ಸಂಗ್ರಹ ಚಿತ್ರಬೆಂಗಳೂರು, ಸೆ.18: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ಸಾರ್ವಜನಿಕರಿಂದ ಸುಂದರವಾದ ಲಾಂಛನ(ಲೋಗೋ)ದ ಮಾದರಿಗಳನ್ನು ಆಹ್ವಾನಿಸಲಾಗಿದೆ.‘ಕರ್ನಾಟಕ ಸಂಭ್ರಮ 50’ ಹಸರಾಗಲಿ ಕರ್ನಾಟಕ: ಉಸಿರಾಗಲಿ ಕನ್ನಡ' ಎಂಬ ಶೀರ್ಷಿಕೆಯಡಿ ರಾಜ್ಯಾದಂತ ವರ್ಷಪೂರ್ತಿ ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇದಕ್ಕೊಂದು ವಿಶೇಷ ಮೆರುಗು ನೀಡಲು ಸರಕಾರವು ಉದ್ದೇಶಿಸಿದೆ. ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಲು ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ(ಲೋಗೋ)ವನ್ನು ಬಳಸಲು ತೀರ್ಮಾನಿಸಲಾಗಿದ್ದು, ಆಸಕ್ತರು ಸುಂದರವಾದ ಲಾಂಛನ(ಲೋಗೋ)ದ ಮಾದರಿಗಳನ್ನು ಕಳುಹಿಸಬಹುದು. ಆಯ್ಕೆಯಾಗುವ ಮಾದರಿ ಲಾಂಛನಕ್ಕೆ 25 ಸಾವಿರ ರೂ.ಗಳ ಬಹುಮಾನವನ್ನು ನಿಗದಿಪಡಿಸಲಾಗಿದೆ.ಲಾಂಛನ(ಲೋಗೋ)ದ ಮಾದರಿಯನ್ನು ಕಳುಹಿಸಲು ಸೆ.20ರಿಂದ ಸೆ.30ರ ವರೆಗೆ ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ಇಲಾಖೆಯ ಜಾಲತಾಣ https://kannadasiri.karnataka.gov.in/ ನಲ್ಲಿ ಪಡೆಯಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.