ಪಣಂಬೂರು, ಸೆ.16: ಬೈಕಂಪಾಡಿ ಸಮೀಪ ಮೀನ ಕಳಿಯ ತಿರುಗು ರಸ್ತೆ ಬದಿಯಲ್ಲಿ ಇದ್ದಿಲು ಹುಡಿ ತುಂಬಿದ್ದ ಗೋಣಿ ಚೀಲಗಳನ್ನು ಭಾರಿ ಪ್ರಮಾಣದಲ್ಲಿ ಎಸೆದು ಹೋಗಿದ್ದ ಕಂಪೆನಿಗೆ ಮಂಗಳೂರು ಮಹಾ ನಗರ ಪಾಲಿಕೆ ಭಾರೀ ದಂಡ‌ ವಿಧಿಸಿದೆ.ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತುರ್ತು ಕಾರ್ಯಾಚರಣೆ ನಡೆಸಿದ ಮಹಾ ನಗರ ಪಾಲಿಕೆಯ ಸುರತ್ಕಲ್  ವಿಭಾಗದ ಅಧಿಕಾರಿಗಳು ಸಂಸ್ಥೆಗೆ 10ಸಾವಿರ ರೂ. ದಂಡ ವಿಧಿಸಿದ್ದಾರೆ.  ಜೊತೆಗೆ ರಸ್ತೆ ಬದಿಯಿದ್ದ ಸುಮಾರು 250ಕ್ಕೂ ಹೆಚ್ಚಿನ ಇದ್ದಿಲು ಹುಡಿ ತುಂಬಿದ್ದ ಗೋಣಿ ಚೀಲಗಳನ್ನು ಸಂಸ್ಥೆಯವರಿಂದಲೇ ವಿಲೇವಾರಿ ಮಾಡಿಸೊದ ಘಟನೆಯೂ ನಡೆಯಿತು.  ಸರಕಾರ ರಾಷ್ಟ್ರದಾದ್ಯಂತ ಸ್ವಚ್ಚತಾ ಆಂದೋಲನ ನಡೆಸುತ್ತಿದ್ದರೆ, ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ ಬದಿ ಮಲಿನ ಗೊಳಿಸಿರುವ ಕುರಿತು ಸಾರ್ವಜನಿಕರು ಮಂಗಳೂರು ಮಹಾ ನಗರ ಪಾಲಿಕೆಯ ಸುರತ್ಕಲ್ ವಿಭಾಗದ ಕಚೇರಿಗೆ ದೂರು ನೀಡಿದ್ದರು.   ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಸುರತ್ಕಲ್ ವಿಭಾಗೀಯ ಆಯುಕ್ತೆ ವಾಣಿ ಆಳ್ವ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡಿ ತಪಾಸಣೆ ನಡೆಸಿ ದಂಡ ವಿಧಿಸುವ ಮೂಲಕ ಸ್ವಚ್ಚತೆಯ ಅರಿವು ಮೂಡಿಸಿದ್ದಾರೆ. 