ಬೆಂಗಳೂರು, ಸೆ.11: ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು (ಸೆ.11) ಬೆಂಗಳೂರು ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ, ನಗರದಲ್ಲಿ ಸಂಚಾರ ಮಾರ್ಪಾಡು ಮಾಡಿ ಆದೇಶ ಹೊರಡಿಸಲಾಗಿದೆ.ಬಂದ್ ಅಂಗವಾಗಿ ಕೇಂದ್ರ ರೈಲ್ವೆ ನಿಲ್ದಾಣದಿಂದ ಆಟೋ, ಖಾಸಗಿ ವಾಹನಗಳ ರ‍್ಯಾಲಿ ಏರ್ಪಡಿಸಿದ್ದು, ಖೋಡೆ ಸರ್ಕಲ್‍ಗೆ ಬರುವ ವಾಹನಗಳು, ಆರ್.ಆರ್.ಜಂಕ್ಷನ್ ಮೂಲಕ ಕೃಷ್ಣ ಪ್ಲೋರ್, ಮಲ್ಲೇಶ್ವರಂ ಕಡೆಗೆ ಹೋಗುವುದು. ಗೂಡ್‍ಶೆಡ್ ರಸ್ತೆ ಕಡೆಯಿಂದ ಬರುವ ವಾಹನಗಳು, ಜಿ.ಟಿ.ರಸ್ತೆ ಮುಖಾಂತರ ಸಂಗೊಳ್ಳಿರಾಯಣ್ಣ ಸರ್ಕಲ್, ಓಕಳಿಪುರಂ, ಸುಜಾತ ಮೂಲಕ ಮುಂದೆ ಹೋಗುವುದು.ಆನಂದ್‍ರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು, ಹಳೇ ಜೆಡಿಎಸ್ ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು. ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು, ಪ್ಯಾಲೇಸ್ ರಸ್ತೆ, ಮಹಾರಾಣಿ ಅಂಡರ್‍ಪಾಸ್, ಬಸವೇಶ್ವರ ಸರ್ಕಲ್ ಮುಖಾಂತರ ಸಂಚರಿಸುವುದು ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.