ಪಟಾಕಿ ದುರಂತದ ಸ್ಥಳಕ್ಕೆ ಭೇಟಿ ನೀಡಿದ ಬೊಮ್ಮಯಿ ಹಾವೇರಿ, ಸೆ.9: ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಲು ರಾಜ್ಯ ಸರಕಾರ ಕುಂಟು ನೆಪ ಹೇಳುತ್ತಿದೆ. ಬರ ಘೋಷಣೆಗೆ ಮುಹೂರ್ತ ನೋಡುತ್ತಿದ್ದೀರಾ? ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.ಶನಿವಾರ ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿ ನಡೆದಿದ್ದ ಪಟಾಕಿ ದುರಂತದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ 1ಲಕ್ಷ ರೂ.ಪರಿಹಾರ ನೀಡಿ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ಬರಗಾಲ ಘೋಷಣೆ ಮಾಡುತ್ತೇವೆ ಎಂದು ಹೇಳಿ, ಇಲ್ಲಿಯವರೆಗೂ ಘೋಷಣೆ ಮಾಡಿಲ್ಲ. ಕೇಂದ್ರಕ್ಕೆ ಪತ್ರ ಬರೆದಿದ್ದೆವೆ ಎಂದು ನೆಪ ಹೇಳುತ್ತಿದ್ದಾರೆ ಎಂದು ಕಿಡಿಗಾರಿದರು.  ಮಳೆಗಾಲ ಮುಗಿಯುತ್ತ ಬಂತು ಈಗೇನು ಘೋಷಣೆ ಮಾಡುತ್ತಾರೆ. ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೋರಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕೊರತೆಯಿಂದ ತೊಂದರೆಯಾಗಿದೆ. ಹಣಕಾಸಿನ ನೇರವು ನೀಡಿ ವಿದ್ಯುತ್ ಖರೀದಿ ಮಾಡಬೇಕು. ಬರಗಾಲ ಘೋಷಣೆ ಮಾಡದೆ ಸುಮ್ಮನೆ ಮುಂದಕ್ಕೆ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇರುವ ಹಣ ಬಳಕೆ ಮಾಡುತ್ತಿಲ್ಲ. ಇನ್ನೂ ಯಾವಾಗ ಬರಗಾಲ ಘೋಷಣೆ ಮಾಡುವುದು? ಎಂದು ಅವರು ಪ್ರಶ್ನಿಸಿದರು.   ಇತ್ತೀಚೆಗೆ ನಡೆದ ಪಟಾಕಿ ದುರಂತದಲ್ಲಿ ಅನಾಹುತ ಆಗಿದೆ. ದಸರಾ-ದೀಪಾವಳಿ ಹಬ್ಬಕ್ಕೆ ದಾಸ್ತಾನು ಮಾಡಿದ್ದ ಪಟಾಕಿ ಸ್ಪೋಟವಾಗಿದೆ. ಇದರಲ್ಲಿ ನಾಲ್ವರು ಮೃತಪಟ್ಟಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದ ಪಟಾಕಿ ಸಂಗ್ರಹ ಮಾಡಿದ್ದು ತಪ್ಪು. ಮುಂಜಾಗ್ರತಾ ಮಾರ್ಗಗಳನ್ನು ಇಟ್ಟಿರಬೇಕು, ಆದರೆ ಅಂತಹ ಕ್ರಮ ಕೈಗೊಂಡಿರುವುದು ಕಾಣಿಸುತ್ತಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.  ಜಿಲ್ಲಾಧಿಕಾರಿಗಳು ಇಂತಹ ಸ್ಥಳಗಳಲ್ಲಿ ಬಿಗಿಯಾದ ನಿಯಮಗಳನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತವೆ. ಈ ದುರಂತ ನಡೆದಾಗ ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದೇವು, ಅದರಂತೆ ಇಂದು ಪಕ್ಷದಿಂದ ಪರಿಹಾರ ನೀಡಿದ್ದೇವೆ ಎಂದು ಅವರು ಹೇಳಿದರು.   ಹಾವೇರಿ  ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ನಾನು ಅಧಿವೇಶನದಲ್ಲಿ ಹೇಳಿದರೂ ಕೃಷಿ ಸಚಿವರು ಅಲ್ಲಗಳೆದಿದ್ದರು. ಆತ್ಮಹತ್ಯೆ ಪ್ರಕರಣಗಳಲ್ಲಿ ಎಫ್‍ಎಸ್‍ಎಲ್ ರಿಪೋರ್ಟ್ ಬರುವುದು ವಿಳಂಬವಾಗುತ್ತದೆ. ಕನಿಷ್ಠ 15-20 ದಿನ ಸಮಯ ಬೇಕಾಗುತ್ತದೆ. ರೈತರು ವಿವಿಧ ರೂಪದಲ್ಲಿ ಸಾಲ ಮಾಡಿರುತ್ತಾರೆ. ಮೃತರ ಕುಟುಂಬಗಳಿಗೆ ಕೂಡಲೆ ಪರಿಹಾರ ಕೊಡಬೇಕು ಎಂದು ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.  