ಚಿತ್ರ- ( KSRTC ಹೊಸ ಮಾದರಿಯ ಪ್ರೊಟೊ ಟೈಪ್‌ ಬಸ್‌) ಬೆಂಗಳೂರು: ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹಿಳೆಯರ ಉಚಿತ ಬಸ್‌ ಪ್ರಯಾಣ ಯೋಜನೆಗೆ ಬಲ ತುಂಬುವ ನಿಟ್ಟಿನಲ್ಲಿ ಹೊಸದಾಗಿ ಒಂದು ಸಾವಿರಕ್ಕೂ ಅಧಿಕ ಬಸ್‌ಗಳ ಖರೀದಿಗೆ ರಾಜ್ಯ ಸರಕಾರ ಮುಂದಾಗಿದೆ. ಸಾರಿಗೆಯ ನಾಲ್ಕು ನಿಗಮಗಳಲ್ಲಿ ಬಸ್‌ ಖರೀದಿಸಲು ವಿಶೇಷ ಬಂಡವಾಳ ನೆರವು ಅಡಿ ಈಗಾಗಲೇ ಸರಕಾರದಿಂದ 500 ಕೋಟಿ ರೂ. ಮಂಜೂರು ಮಾಡಲಾಗಿದೆ. ಬಸ್ ಖರೀದಿಸುವ ಪ್ರಸ್ತಾವನೆಗೆ ಸಚಿವ ಸಂಪುಟವು ಸಭೆ ಗುರುವಾರ ಒಪ್ಪಿಗೆ ನೀಡಿದೆ. ಯಾವ ಸಂಸ್ಥೆಗೆ ಎಷ್ಟು ಬಸ್‌?ʼʼಕೆಎಸ್ಸಾರ್ಟಿಸಿಯಿಂದ 100 ಕೋಟಿ ರೂ.ವೆಚ್ಚದಲ್ಲಿ 250 ಹೊಸ ಬಸ್ಸುಗಳು, ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮವು 150 ಕೋಟಿ ರೂ.ವೆಚ್ಚದಲ್ಲಿ 375 ಹೊಸ ಬಸ್ಸುಗಳು, ಕೆಕೆಆರ್‍ಟಿಸಿಯಲ್ಲಿ 300 ಕೋಟಿ ರೂ.ವೆಚ್ಚದಲ್ಲಿ 250 ಬಸ್ಸುಗಳು ಹಾಗೂ ಬಿಎಂಟಿಸಿಯಲ್ಲಿ 320 ಎಸಿ ಎಲೆಕ್ಟ್ರಿಕ್ ಬಸ್ಸುಗಳನ್ನು 150 ಕೋಟಿ ರೂ.ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆʼʼ ಎಂದು ಗುರುವಾರ ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದರು.  ʻಶಕ್ತಿʻ ಯೋಜನೆ ಸ್ಮಾರ್ಟ್‌ ಕಾರ್ಡ್ ವಿತರಣೆ ಅವಧಿ ವಿಸ್ತರಣೆಶಕ್ತಿ ಯೋಜನೆಯಡಿ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲು ಈ ಹಿಂದೆ ಕೈಗೊಂಡಿದ್ದ ನಿರ್ಣಯಕ್ಕೆ ಘಟನೋತ್ತರ ಅನುಮೋದನೆ ನೀಡುವುದರ ಜೊತೆಗೆ, ಈ ಅವಧಿಯನ್ನು ಇನ್ನೂ ಆರು ತಿಂಗಳು ವಿಸ್ತರಿಸಲು ನಿರ್ಧರಿಸಿದೆ, ಅಲ್ಲದೆ, ಸ್ಮಾರ್ಟ್‍ಕಾರ್ಡ್‍ಗಾಗಿ ಫಲಾನುಭವಿಗಳಿಗೆ ಒದಗಿಸಲಾಗುತ್ತಿರುವ ಪ್ರತಿ ಕಾರ್ಡ್‍ಗೆ 14.16 ರೂ.ಸೇವಾ ಶುಲ್ಕವನ್ನು ನಿಗದಿ ಮಾಡಲಾಗಿದೆ. 13,000 ಚಾಲಕ/ನಿರ್ವಾಹಕರ ನೇಮಕ? ʼರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿಯಿರುವ 13,000 ಚಾಲಕ/ನಿರ್ವಾಹಕರನ್ನು ನೇಮಕ ಮಾಡಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆʼ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. 