ರಾಮನಗರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ್ದ ಭಾರತ್ ಜೋಡೊ ಯಾತ್ರೆ ಒಂದನೇ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ರಾಮನಗರದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸಹಿತ ಹಲವು ನಾಯಕರು ಪಾಲ್ಗೊಂಡರು. ಸುಮಾರು 5 ಕಿ.ಮೀ ಸಾಗಿದ ಪಾದಯಾತ್ರೆಯಲ್ಲಿ ಸಿಎಂ, ಡಿಸಿಎಂ ಜೊತೆ ಸಂಸದ ಡಿ.ಕೆ.ಸುರೇಶ್, ಸಚಿವ ಮಂಕಾಳ ವೈದ್ಯ ಸೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದರು. ಬಳಿಕ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು.ಈ ಕುರಿತಾಗಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ʼʼಮೂರು ದಶಕಗಳ ಹಿಂದೆ ಈ ದೇಶದಲ್ಲಿ ರಥಯಾತ್ರೆಯೊಂದು ಹೊರಟಿತ್ತು. ದ್ವೇಷ, ಸುಳ್ಳು, ಅಪನಂಬಿಕೆಗಳನ್ನು ಬಿತ್ತುತ್ತಾ ಸಾಗಿದ ಆ ಯಾತ್ರೆ ಬಹುತ್ವ ಭಾರತದ ಎದೆಯೊಳಗೆ ಮಾಡಿದ ಗಾಯ ಇನ್ನೂ ಮಾಸಿಲ್ಲ. ಆ ಗಾಯಕ್ಕೆ ಪ್ರೀತಿ, ಶಾಂತಿ, ಸಹಬಾಳ್ವೆಯ ಮುಲಾಮು ಹಚ್ಚಿ ಗುಣಪಡಿಸುವ ಸದುದ್ದೇಶದಿಂದ ರಾಹುಲ್ ಗಾಂಧಿಯವರು ಪಾದಯಾತ್ರೆ ಶುರುಮಾಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಪ್ರಜೆಗಳ ದನಿಗೆ ಕಿವಿಗೊಡಬೇಕು. ಅವರ ಕಷ್ಟ-ಸುಖ, ಸಮಸ್ಯೆ-ಸಂಕಷ್ಟಗಳನ್ನು ಅರಿಯುವ ಕೆಲಸವನ್ನು ಮಾಡಬೇಕು. ಜನ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಬದುಕುವ ವಾತಾವರಣವನ್ನು ಕಲ್ಪಿಸಬೇಕು. ಆದರೆ ಭಾರತೀಯ ಜನತಾ ಪಕ್ಷ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಜನರ ನಡುವೆ ಪರಸ್ಪರ ದ್ವೇಷಾಸೂಯೆಗಳನ್ನು ಬಿತ್ತಿ  ಸಮಾಜವನ್ನು ಜಾತಿ-ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಮಾಡುತ್ತಿದೆ. ಅನ್ಯಾಯದ ವಿರುದ್ದ ದನಿ ಎತ್ತುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ. ಇದರ ವಿರುದ್ದ ಸಂಘಟಿತವಾದ ಹೋರಾಟ ನಡೆಯಬೇಕಾಗಿದೆʼʼ ಎಂದು  ಕರೆ ನೀಡಿದ್ದಾರೆ.    