ಬೆಂಗಳೂರು, ಸೆ.5: ಗೌರಿಯ ಕುಟುಂಬ ಬೆಳೆಯುತ್ತಿದೆ. ಇಂದು ಅವಳು ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು. ಅವಳ ಹೋರಾಟವನ್ನು ನಾವು ನಿರಂತರವಾಗಿ ಮುಂದುವರಿಸೋಣ ಎಂದು ನಿರ್ದೇಶಕಿ, ಗೌರಿಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ತಿಳಿಸಿದ್ದಾರೆ.ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯಾಗಿ 6 ವರ್ಷ ಕಳೆದ ನೆನಪಿನ ದಿನವಾಗಿ ಮಂಗಳವಾರ ನಗರದ ಚಾಮರಾಜಪೇಟೆಯ ರುದ್ರಭೂಮಿಯಲ್ಲಿರುವ ಗೌರಿ ಸಮಾಧಿಯ ಬಳಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಗೌರಿಯ ಆಶಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತ ಮುನ್ನಡೆಯೋಣ ಎಂದರು.  ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮಾತನಾಡಿ, ದೇಶಾದ್ಯಂತ ಯುವ ಪೀಳಿಗೆಗೆ, ಹೋರಾಟಗಾರರಿಗೆ ಗೌರಿ ಸ್ಫೂರ್ತಿಯಾಗಿದ್ದಾರೆ. ಈ ವ್ಯವಸ್ಥೆಯೊಳಗೆ ಸೈದ್ಧಾಂತಿಕ ದನಿಯೊಂದನ್ನು ಗುಂಡಿಟ್ಟ ಕೊಂದರು. ಆದರೆ ಇಂದು ಅಂತಹ ಸಾವಿರಾರು ದನಿಗಳು ಯಾವುದಕ್ಕೂ ಬಗ್ಗದೆ ಎದೆಯೊಡ್ಡಿ ಹೋರಾಡುತ್ತಿವೆ ಎಂದು ಹೇಳಿದರು.  ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ರಾಜ್ಯ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ಞಾವಂತಿಕೆ ತೋರುವ ಮೂಲಕ ಸಣ್ಣದೊಂದು ನಿರಾಳತೆಯನ್ನು ಕಂಡಿದ್ದೇವೆ. ಸಣ್ಣದೊಂದು ನಿಟ್ಟುಸಿರು ಸಿಕ್ಕಿದೆ. ಗೌರಿಯವರ ಎದೆಯ ಮೇಲಿನ ಚಪ್ಪಡಿಯ ಭಾರ ಸ್ವಲ್ಪ ಕಡಿಮೆಯಾಗಿದೆ. ನಮ್ಮ ಕುತ್ತಿಗೆಯ ಮೇಲೆ ಕೂತಿದ್ದ ದುಸ್ವಪ್ನ ಮತ್ತು ದುರಾಡಳಿತವನ್ನು ಸ್ವಲ್ಪ ಮಟ್ಟಿಗೆ ಸರಿಸಿದ್ದೇವೆ ಎಂದು ಬಣ್ಣಿಸಿದರು.  ಹಲವು ಪರ್ಯಾಯ ಸಂಸ್ಥೆಗಳು ಚಿಗುರೊಡೆದಿವೆ. ಗೌರಿಯ ಕುಟುಂಬ ವಿಶಾಲವಾಗುತ್ತಿದೆ. ಎಲ್ಲ ಕಡೆ ಇರುವ ಜೀವಪರ ಕೊಂಡಿಗಳು ಬೆಸೆಯುತ್ತಿವೆ. ಗುರಿಯ ಜೊತೆ ಸಾಗುತ್ತಿದ್ದೇವೆ. 2024ಕ್ಕೆ ನಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ನೂರ್ ಶ್ರೀಧರ್ ಎಚ್ಚರಿಸಿದರು.  ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಗೌರಿಯಕ್ಕ ನಮಗೆಲ್ಲ ಒಂದು ರೆಫರೆನ್ಸ್. ಅವರು ಅಂದು ಹೇಳಿದ ಎಲ್ಲ ಮಾತುಗಳು ಇಂದು ಸತ್ಯವಾಗುತ್ತಿವೆ. ಮನೆಯ ಹಿರಿಯಕ್ಕನನ್ನು ಕಳೆದುಕೊಂಡಿದ್ದೇವೆ ಎಂದರು.  ಚಿತ್ರ ನಟ ದುನಿಯಾ ವಿಜಯ್ ಮಾತನಾಡಿ, ಗೌರಿಯಕ್ಕ ಯಾವಾಗಲೂ ಬೆನ್ನು ತಟ್ಟು ಆರೈಸುತ್ತಿದ್ದವರು. ನನ್ನ ಸ್ವಃತ ಅಕ್ಕನನ್ನು ಕಳೆದುಕೊಂಡಿರುವ ನೋವಿದೆ. ಎಲ್ಲರೂ ಗೌರಿಯಕ್ಕನ ಚಿಂತನೆಗಳಿಗೆ ಶಕ್ತಿ ತುಂಬೋಣ ಎಂದರು.  ಪುಷ್ಪನಮನ ಕಾರ್ಯಕ್ರಮದಲ್ಲಿ ರೈತ ಮುಖಂಡ ಬಲ್ವಿಂದರ್ ಸಿಂಗ್, ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್, ಗೌರಿಯ ಒಡನಾಡಿಗಳಾದ ಸಿರಿಮನೆ ನಾಗರಾಜ್, ಡಾ.ಎಚ್.ವಿ.ವಾಸು, ಡಿ.ಉಮಾಪತಿ, ಕೆ.ಎಲ್.ಅಶೋಕ್, ವಿ.ಎಸ್.ಶ್ರೀಧರ್, ಶಿವಸುಂದರ್, ಮಲ್ಲಿಗೆ ಸಿರಿಮನೆ, ದು.ಸರಸ್ವತಿ, ದೀಪು, ಹಾಡಗಾರರಾದ ಜನಾರ್ದನ್, ಚಿಂತನ್ ವಿಕಾಸ್ ಇದ್ದರು.  ʼನ್ಯಾಯದ ಪರವಾಗಿ ನಿಂತ ಗೌರಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಅನ್ಯಾಯದಿಂದ ಕೊಲ್ಲಲಾಯಿತು. ಗೌರಿಯ ಸಾಮಾಜಿಕ ಹೋರಾಟಗಳು, ನೈತಿಕ ಬದುಕು, ದಿಟ್ಟತನದ ಮಾತುಗಳು ಎಲ್ಲವೂ ನಮ್ಮ ಜೀವನದ ಭಾಗವಾದರೆ ಮಾತ್ರ ಇಂದಿನ ವ್ಯವಸ್ಥೆಯೊಳಗೆ ಸಾಮಾಜಿಕ ನ್ಯಾಯ ಪರಿಕಲ್ಪನೆ ಕಾಣಲು ಸಾಧ್ಯʼ-ರಾಕೇಶ್ ಟಿಕಾಯತ್, ಭಾರತೀಯ ಕಿಸಾನ್ ಯೂನಿಯನ್ ಮುಖಂಡ 