ಸಾಂದರ್ಭಿಕ ಚಿತ್ರಬೆಂಗಳೂರು, ಆ.3: ಇನ್‍ಸ್ಟಾಗ್ರಾಮ್‍ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ನಂತರ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಇಲ್ಲಿನ ಎಚ್‍ಎಸ್‍ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.ಅಸ್ಸಾಂ ಮೂಲದ ಫೈಸಲ್ ಬಂಧಿತ ಆರೋಪಿ. ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಸಕ್ರಿಯವಾಗಿರುವ ಮಹಿಳೆಯರ ಪ್ರೊಫೈಲ್ ಹುಡುಕಿ ಫಾಲೋ ಮಾಡುತ್ತಿದ್ದ ಫೈಸಲ್, ನಂತರ ಅವರೊಂದಿಗೆ ಸ್ನೇಹ ಸಂಪಾದಿಸುತ್ತಿದ್ದ. ಬಳಿಕ ಅವರನ್ನು ಭೇಟಿಯಾಗಲು ಹೇಳಿ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ. ಈ ವೇಳೆ ಮಹಿಳೆಯರಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದು, ನಂತರ ಆ ವಿಡಿಯೋವನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ನೀಡದೇ ಹೋದಲ್ಲಿ ನಿಮ್ಮ ಗಂಡನಿಗೆ ವಿಡಿಯೋ ಕಳುಹಿಸುವುದಾಗಿ ಬೆದರಿಸುತ್ತಿದ್ದ ಎಂದು ದೂರಲಾಗಿದೆ.ಇದೇ ರೀತಿ ಮಹಿಳೆಯೊಬ್ಬರನ್ನು ಬೆದರಿಸಿದ್ದ ಆರೋಪಿ ಅವರನ್ನು ಚೆನ್ನೈಗೆ ಬರುವಂತೆ ಕರೆದಿದ್ದಾನೆ. ಈ ಬಗ್ಗೆ ನೊಂದ ಮಹಿಳೆ ಎಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚೆನ್ನೈಗೆ ತೆರಳಿ ಆರೋಪಿ ಫೈಸಲ್‍ನನ್ನು ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ಹಲವರಿಗೆ ವಂಚಿಸಿರುವ ಶಂಕೆಯಿದ್ದು, ಆತನ ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.