ನಟ ರಿಷಬ್‌ ಶೆಟ್ಟಿಬೆಂಗಳೂರು: ಕಾಂತಾರ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟ ರಿಷಬ್‌ ಶೆಟ್ಟಿ ಅವರು ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಬಾಲಿವುಡ್‌ ಕುರಿತು ಟೀಕೆ ಮಾಡಿದ್ದು, ಇದರ ಬೆನ್ನಲ್ಲೇ ನೆಟ್ಟಿಗರು ರಿಷಬ್‌ ಶೆಟ್ಟಿ ಅವರಿಗೆ ʼಆನ್‌ಲೈನ್‌ ಪಾಠʼ ಶುರುವಿಟ್ಟು ಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಇತ್ತೀಚೆಗೆ ಸಂದರ್ಶನ ನೀಡಿರುವ ರಿಷಬ್‌ ಶೆಟ್ಟಿ ಅವರು, “ಭಾರತೀಯ ಚಲನಚಿತ್ರಗಳಲ್ಲಿ ಅದರಲ್ಲೂ ಬಾಲಿವುಡ್‌ ಚಿತ್ರಗಳಲ್ಲಿ, ಭಾರತದ ಬಗ್ಗೆ ಕೆಟ್ಟದಾಗಿ ತೋರಿಸಲಾಗುತ್ತದೆ, ಇಂತಹ ಚಿತ್ರಗಳು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶಿಸಲ್ಪಡುತ್ತಿದೆ.  ನನ್ನ ದೇಶ ನನ್ನ ಹೆಮ್ಮೆ, ನನ್ನ ರಾಜ್ಯ, ಭಾಷೆ ನಮ್ಮ ಹೆಮ್ಮೆ. ಹೀಗಿರುವಾಗ ಅದರ ಕುರಿತು ಸಕರಾತ್ಮಕ ರೀತಿಯಲ್ಲಿ ಯಾಕೆ ತೋರಿಸಬಾರದು” ಎಂದು ಹೇಳಿದ್ದಾರೆ. ಸಂದರ್ಶನದ ಈ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಕಾಂತಾರ ಚಿತ್ರದಲ್ಲಿ ಮಹಿಳೆಯನ್ನು ಸರಕಿನಂತೆ ಬಿಂಬಿಸಿದಕ್ಕೆ ನೆಟ್ಟಿಗರು ರಿಷಬ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಟಿ ಸಪ್ತಮಿ ಗೌಡ ಅವರ ಪಾತ್ರದ ಸೊಂಟವನ್ನು ಅನುಮತಿ ಇಲ್ಲದೆ ಚಿವುಟುವ ದೃಶ್ಯದ ಬಗ್ಗೆ ಗಮನ ಸೆಳೆದಿರುವ ನೆಟ್ಟಿಗರು, ಮೊದಲಿಗೆ ಮಹಿಳೆಯ ಅನುಮತಿ ಇಲ್ಲದೆ ಅವರ ದೇಹವನ್ನು ಮುಟ್ಟುವುದನ್ನು ನಿಮ್ಮ ಚಿತ್ರಗಳಲ್ಲಿ ವೈಭವೀಕರಿಸುವುದನ್ನು ನಿಲ್ಲಿಸಿ, ನಂತರ ದೇಶ, ಭಾಷೆ ಹೆಮ್ಮೆಯ ಬಗ್ಗೆ ಮಾತಾಡಿ ಎಂದು ಸಲಹೆ ನೀಡಿದ್ದಾರೆ.   70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ಕಾಂತಾರ' ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ರಿಷಬ್‌ ಶೆಟ್ಟಿ ಅವರು, ನಟ ಪ್ರಮೋದ್ ಶೆಟ್ಟಿ ಅಭಿನಯದ ಮುಂಬರುವ ಚಿತ್ರ 'ಲಾಫಿಂಗ್ ಬುದ್ಧ' ಪ್ರಚಾರ ಮಾಡುತ್ತಿದ್ದಾರೆ.