ಬೆಂಗಳೂರು, ಆ.25: ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ‘ಗೊಂಡ ಸಮುದಾಯ’ಕ್ಕೆ ಸೇರಿರುವ ಬಗ್ಗೆ ಸಿಆರ್‌ ಇ ಸೆಲ್ ಪರಿಶೀಲಿಸಿ ವರದಿ ಕೊಟ್ಟ ನಂತರವೂ ಜಾತಿ/ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ಅನಗತ್ಯವಾಗಿ ವಿಳಂಬ ಮಾಡಿದರೆ ಜಿಲ್ಲಾಧಿಕಾರಿಗಳನ್ನು ಅಮಾನತ್ತು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ  ನೀಡಿದ್ದಾರೆ.ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ  ಗೊಂಡ ಹಾಗೂ ಕೊಡುಗು ಜಿಲ್ಲೆಯಲ್ಲಿ ಕುರುಬ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ,  ಸಿಂಧುತ್ವ ಪ್ರಮಾಣ ಪತ್ರ ನೀಡುವ ಸಂಬಂಧ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ  ನಡೆದ ಸುದೀರ್ಘ ಸಭೆಯಲ್ಲಿ ಗೊಂಡ ಸಮುದಾಯದವರ ಅಹವಾಲುಗಳನ್ನು ಸಮಗ್ರವಾಗಿ ಕೇಳಿ ಅಧಿಕಾರಿಗಳಿಗೆ ಅವರು ಸ್ಪಷ್ಟ ಸೂಚನೆ ನೀಡಿದರು.  ಸಿಆರ್‍ಇ ಸೆಲ್ ಇರುವುದು ಹಕ್ಕುಗಳ ರಕ್ಷಣೆಗಾಗಿ ಹಾಗೂ ಪ್ರಕರಣಗಳ ವಿಚಾರಣೆಗಾಗಿ. ಸಿಆರ್‍ಇ ಸೆಲ್ ವಿಚಾರಣೆ ಮಾಡಿ ನೀಡಿದ ವರದಿಯನ್ನು ಅಂಗೀಕರಿಸಬೇಕು. ಕಲಬುರಗಿ, ಬೀದರ್ ಮತ್ತು ಯಾದಗಿರಿ  ಜಿಲ್ಲೆಗಳಲ್ಲಿ ಗೊಂಡ ಎನ್ನುವ ಸಮುದಾಯ ಎಸ್.ಟಿ ಗೆ ಸೇರಿದೆ.  ಶಾಲಾ ದಾಖಲಾತಿ,  ಪೆÇೀಷಕರ ಇತಿಹಾಸವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಬಹುದು ಎಂದು ಮುಖ್ಯಮಂತ್ರಿ ತಿಳಿಸಿದರು.   ದೂರುಗಳಿದ್ದರೆ ತನಿಖೆ ಮಾಡಿ: ಪ್ರಮಾಣಪತ್ರ ನೀಡಲು ಅನಗತ್ಯವಾಗಿ ವಿಳಂಬ ಮಾಡಬಾರದು. ದೂರುಗಳು ಇದ್ದರೆ ತನಿಖೆ ಮಾಡಿಸಬೇಕು. ದೂರುಗಳು ಇಲ್ಲದೆ ಹೋದರೆ ಸ್ವಯಂ ಪ್ರೇರಿತವಾಗಿ  ಪ್ರಕರಣಗಳನ್ನು ಕೈಗೊಳ್ಳುವಂತಿಲ್ಲ. ಸಿ.ಆರ್.ಇ ಸೆಲ್ ನವರು ತನಿಖೆ ಮಾಡಿದ ವರದಿ ನೀಡಿದ ಕೂಡಲೇ  ಅಂಗೀಕರಿಸಿ,  ಸಂಬಂಧಿಸಿದ  ಜಿಲ್ಲಾಧಿಕಾರಿಗಳು ಕೂಡಲೆ ಇತ್ಯರ್ಥಗೊಳಿಸಬೇಕು ಎಂದು ಅವರು ಸೂಚಿಸಿದರು.    ಅನಗತ್ಯವಾಗಿ ವಿಳಂಬ ಸಲ್ಲದು: ಕೊಡಗು ಜಿಲ್ಲೆಯ ಕುರುಬ ಸಮುದಾಯದವರು ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿರುತ್ತಾರೆ. ಅನಗತ್ಯವಾಗಿ ವಿಳಂಬ ಮಾಡದೇ ತ್ವರಿತವಾಗಿ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು. ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ವಿದ್ಯಾರ್ಥಿ ವೇತನಗಳನ್ನು ನೀಡಬಹುದು ಎಂದು ಮುಖ್ಯಮಂತ್ರಿ ಸೂಚಿಸಿದರು.   ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಈಶ್ವರ್ ಖಂಡ್ರೆ, ಬಿ.ನಾಗೇಂದ್ರ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್,  ಕಲಬುರಗಿ, ಬೀದರ್, ಯಾದಗಿರಿ ಹಾಗೂ ಕೊಡಗು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ.ಕಲ್ಲೇಶ್, ಗೊಂಡ ಹಾಗೂ ಕುರುಬ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.  