ಬೆಂಗಳೂರು, ಆ.24: ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಲಕ್ಕಯ್ಯ ಬಡಾವಣೆಯ ಪೊಲಮ್ಮಾಸ್ ಹೋಟೆಲ್ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.ಆ.24ರ ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲಮ್ಮಾಸ್ ಮೆಸ್ ಪಕ್ಕದ ಬಿಲ್ಡಿಂಗ್‍ನ ಕೆಳಮಹಡಿಯಲ್ಲಿ ಸ್ಫೋಟ ಸಂಭವಿಸಿದ್ದು, ಪರಿಣಾಮ ಕಟ್ಟಡದ ಹೊರಭಾಗದಲ್ಲಿ ಮಲಗಿದ್ದ ರವಿ (40) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಕೆಲ ವರ್ಷಗಳಿಂದ ಪೊಲಮ್ಮಾಸ್ ಎಂಬ ಆಂಧ್ರ ಮೆಸ್ ನಡೆಸಲಾಗುತ್ತಿದ್ದು, ಎರಡನೇ ಮಹಡಿಯಲ್ಲಿ ಅಡುಗೆ ಮಾಡಲಾಗುತ್ತದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪಕ್ಕದ ಬಿಲ್ಡಿಂಗ್‍ನ ಕೆಳ ಮಹಡಿಯಲ್ಲಿ ಉಳಿದುಕೊಳ್ಳಲು ಮನೆ ಮಾಡಿ ಕೊಟ್ಟಿದ್ದು, ಅಲ್ಲಿಯೇ ಸಿಲಿಂಡರ್‍ಗಳನ್ನು ಸ್ಟೋರ್ ಮಾಡಿ ಇಡಲಾಗಿತ್ತು. ಮೇಲಿರುವ ಮೆಸ್ ಕಿಚನ್‍ಗೆ ಈ ಕೆಳಮಹಡಿಯಲ್ಲಿ ಇಟ್ಟಿರುವ ಸಿಲಿಂಡರ್‍ಗಳ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿತ್ತು. ರೆಡ್ ಪೈಪ್ ಮೂಲಕ ಈ ಬಿಲ್ಡಿಂಗ್‍ನಿಂದ ಮೆಸ್ ಬಿಲ್ಡಿಂಗ್‍ಗೆ ಗ್ಯಾಸ್ ಸಂಪರ್ಕ ಕೊಡಲಾಗಿದ್ದು, ಎಂದಿನಂತೆ ಗುರುವಾರ ಸಹ ಮೆಸ್‍ನ ಕಿಚನ್‍ನಲ್ಲಿ ಅಡುಗೆ ಮಾಡಲು ಶುರು ಮಾಡಲಾಗಿತ್ತು. ಈ ವೇಳೆ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದು, ಅದನ್ನು ಬದಲಾಯಿಸುವಾಗ ಗ್ಯಾಸ್ ರೆಫ್ಲೆಕ್ಟರ್ ಒಡೆದು ಸಿಲಿಂಡರ್ ಸ್ಫೋಟವಾಗಿದೆ ಎಂಬ ಗೊತ್ತಾಗಿದೆ.   ಈ ವೇಳೆ ಗ್ಯಾಸ್ ಸಿಲಿಂಡರ್ ಬದಲಾಯಿಸುತ್ತಿದ್ದ ಚೋರ್ಲಾ ಹಾಗೂ ನಾಗರಾಜ್ ಎಂಬುವರಿಗೆ ಗಾಯಗಳಾಗಿದೆ. ಸ್ಫೋಟದ ತೀವ್ರತೆಗೆ ಶೆಟರ್‍ವರೆಗೂ ಸಿಲಿಂಡರ್ ಸಿಡಿದಿದ್ದು, ಶೆಟರ್ ಬಳಿ ಮಲಗಿದ್ದ ರವಿ ಎಂಬಾತನಿಗೆ ಬಂದು ಬಡಿದಿದೆ. ಪರಿಣಾಮ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.  