ಬಂಧಿತ ಆರೋಪಿಗಳು ಶಿವಮೊಗ್ಗ,ಆ.24: ಹೊಳೆಹೊನ್ನೂರಿನಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಎಸ್ ಪಿ ಜಿ.ಕೆ.ಮಿಥುನ್ ಕುಮಾರ್  ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನದ ಹಿಂದೆ ನಡೆದಿದ್ದ ಘಟನೆಯ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿತ್ತು. ಸುಮಾರು 50 ಜನ ಪೊಲೀಸ್ ಸಿಬ್ಬಂದಿ ತಂಡದಲ್ಲಿದ್ದರು. ಚಿತ್ರದುರ್ಗದ ಗಣೇಶ್ ಮತ್ತು ವಿನಯ್ ಬಂಧಿತ ಆರೋಪಿಗಳು ಎಂದು ತಿಳಿಸಿದರು.ಆರೋಪಿಗಳು ಚಿತ್ರದುರ್ಗ ಸಮೀಪ ಪಂಡ್ರಹಳ್ಳಿಯವರು. ಚಿತ್ರದುರ್ಗದಿಂದ ಜೋಗಕ್ಕೆ ಹೋಗುವ ಮಾರ್ಗದಲ್ಲಿ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.  ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಇನ್ನಷ್ಟು ವಿಷಯ ತಿಳಿದು ಬರಲಿದೆ. ತಾಂತ್ರಿಕ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರತಿಮೆ ಮರು ಸ್ಥಾಪನೆ ಸಂಬಂಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದುಹೇಳಿದರು.  ಸುದ್ದಿಗೋಷ್ಟಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ,ಭದ್ರಾವತಿ ಉಪ ವಿಭಾಗ ಡಿವೈಎಸ್‌ಪಿ ಹಾಗೂ ಸಿಎನ್‌ಎನ್ ಠಾಣೆ ಇನ್ಸ್‌ಪೆಕ್ಟರ್ ದೀಪಕ್ ಇದ್ದರು.