ಧಾರವಾಡ:  ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಇಲ್ಲಿನ ಅತ್ತಿಕೊಳ್ಳ ಬಡಾವಣೆಯಲ್ಲಿ ಬುಧವಾರ ವರದಿಯಾಗಿದೆ. ಆಸ್ತಿ ವಿವಾದ ಸಂಬಂಧ ಎರಡು ಕಡೆಯವರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಆತಂಕದಿಂದ ಮುಂಬೈ ಮೂಲದ ಸುಶಾಂತ್ ಅಗರವಾಲ್‌ ಎಂಬಾತ ಗುಂಡು ಹಾರಿಸಿದ್ದಾನೆನ್ನಲಾಗಿದೆ. ಮತ್ತೊಂದು ಕಡೆಯವರನ್ನು ಹೆದರಿಸಲು ಗುಂಡಿನದಾಳಿ ನಡೆಸಿರುವುದಾಗಿ​ ಪೊಲೀಸ್​ ವಿಚಾರಣೆಯಿಂದ ತಿಳಿದುಬಂದಿದೆ.ನಿವೇಶನದ ಸಂಬಂಧ ಸುಶಾಂತ್​ ಹಾಗೂ ಪವನ ಕುಲಕರ್ಣಿ ಮಧ್ಯೆ ಈ ಹಿಂದಿನಿಂದಲೂ ವಿವಾದ ನಡೆಯುತ್ತಿತ್ತು. ಇಬ್ಬರಿಗೆ ಸಂಬಂಧಿಸಿದ ಜಾಗವು ಅಕ್ಕಪಕ್ಕದಲ್ಲೇ ಇದ್ದು, ಇಂದು ಮತ್ತೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಆಗ ಸುಶಾಂತ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ವಿದ್ಯಾಗಿರಿ ಠಾಣೆ ಪೊಲೀಸರು ಸುಶಾಂತನನ್ನು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.