ಬೆಂಗಳೂರು, ಆ. 22:  ಇಲ್ಲಿಯವರೆಗೆ ಕಾಡಾನೆಗಳ ದಾಳಿಯಿಂದ ಐವರು ಮೃತಪಟ್ಟಿರುವ ಬಗ್ಗೆ ತೀವ್ರ ಆಘಾತ ಮತ್ತು ಶೋಕ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಕಾಡಂಚಿನಲ್ಲಿರುವ ಜನರಿಗೆ ಈ ಸಂಬಂಧ ಹೆಚ್ಚಿನ ಜಾಗೃತಿ ಮೂಡಿಸಲು ಮತ್ತು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಮಂಗಳವಾರ ವಿಕಾಸಸೌಧದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಮಾನವ ವನ್ಯಮೃಗಗಳ ಸಂಘರ್ಷ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು,. ಅಮೂಲ್ಯವಾದ ಮಾನವ ಪ್ರಾಣ ಹಾನಿಯೂ ಆಗಬಾರದು, ಅದೇ ವೇಳೆ ವನ್ಯ ಮೃಗಗಳ ಅಕ್ರಮ ವಿದ್ಯುತ್ ಬೇಲಿ ಸ್ಪರ್ಶದಿಂದ ಹಾಗೂ ಬೇಲಿಯಲ್ಲಿ ಹಾಕುವ ಉರುಳಿಗೆ ಸಿಲುಕಿ ಸಾವಿಗೀಡಾಗಬಾರದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.  ‘ಜನವಸತಿಗಳ ಬಳಿ, ರೈತರ ತೋಟ, ಗದ್ದೆಗಳ ಬಳಿ ಆನೆಗಳು ಕಾಣಿಸಿಕೊಂಡಾಗ ತ್ವರಿತವಾಗಿ ಆನೆಗಳನ್ನು ಕಾಡಿಗೆ ಮರಳಿಸಲು ಮತ್ತು ಸುತ್ತಮುತ್ತಲ ಜನರಿಗೆ ವಾಟ್ಸ್‍ಅಪ್, ಎಸ್‍ಎಂಎಸ್ ಮತ್ತು ಸಾರ್ವಜನಿಕ ಪ್ರಚಾರ ವಿಧಾನಗಳ ಮೂಲಕ ಮಾಹಿತಿ ನೀಡಿ, ಜೀವಹಾನಿ ತಗ್ಗಿಸಬೇಕು. ಆನೆಗಳ ಹಾವಳಿ ಹೆಚ್ಚಾಗಿರುವ ಚಾಮರಾಜನಗರ, ಮತ್ತು ಕೊಡಗು ಭಾಗದಲ್ಲಿ ಕಾಡಾನೆಗಳನ್ನು ತಕ್ಷಣವೇ ಕಾಡಿಗೆ ಓಡಿಸಲು ಹಾಲಿ ಕಾರ್ಯನಿರ್ವಹಿಸುತ್ತಿರುವ ಆನೆ ಕ್ಷಿಪ್ರ ಕಾರ್ಯಪಡೆಗಳಲ್ಲಿನ ಗುಂಪುಗಳನ್ನು ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.  ರೇಡಿಯೋ ಕಾಲರ್: ‘ಎಲ್ಲ ಆನೆಗಳೂ ನಾಡಿಗೆ ಬರುವುದಿಲ್ಲ. ಕೆಲವು ಆನೆಗಳು ಮಾತ್ರ ಪದೇ ಪದೇ ನಾಡಿಗೆ ದಾಳಿ ಇಟ್ಟು ಹಾನಿ ಮಾಡುತ್ತವೆ. ಇಂತಹ ಆನೆಗಳನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.   ‘ಪ್ರಸ್ತುತ ರಾಜ್ಯದಲ್ಲಿ ಇಂತಹ 14 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಇದರಿಂದ ಆನೆಗಳ ಚಲನವಲನದ ಬಗ್ಗೆ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಇಲಾಖೆಯಲ್ಲಿ ಪ್ರಸ್ತುತ ಇನ್ನೂ 30 ರೇಡಿಯೋ ಕಾಲರ್ ಲಭ್ಯವಿದ್ದು, ಪುಂಡಾನೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡುವ ಮೊದಲು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ ಎಂದು ಹೇಳಿದರು.  ಇದೀಗ ಇಲಾಖೆಯೇ ರೇಡಿಯೋ ಕಾಲರ್ ಖರೀದಿ ಮಾಡುತ್ತಿದೆ. ಪ್ರತಿ ರೇಡಿಯೋ ಕಾಲರ್‍ಗೆ ಸುಮಾರು 7ಲಕ್ಷ ರೂ.ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಾಡಿಗೆ ಬರುವ ಹೆಚ್ಚಿನ ಸಂಖ್ಯೆಯ ಆನೆಗಳಿಗೆ ರೆಡಿಯೋ ಕಾಲರ್ ಅಳವಡಿಸಬೇಕು ಎಂದು ಅವರು ಸೂಚಿಸಿದರು.  ರೈಲ್ವೆ ಬ್ಯಾರಿಕೇಡ್: ‘ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಉತ್ತಮ ವಿಧಾನವಾಗಿದೆ. ಆನೆಗಳು ಹೆಚ್ಚಾಗಿ ನಾಡಿನತ್ತ ಬರುವ ಪ್ರದೇಶಗಳನ್ನು ಗುರುತಿಸಿ ಬ್ಯಾರಿಕೇಡ್ ಹಾಕುವ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.  