ಹುಬ್ಬಳ್ಳಿ, ಆ. 18: ʼಹುಬ್ಬಳ್ಳಿಯ ಈದ್ಗಾ ಮೈದಾನ ಸಾರ್ವಜನಿಕರ ಆಸ್ತಿʼ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ʼಕಳೆದ ಬಾರಿ ಗಣೇಶ ಕೂರಿಸಿದ್ದೇವೆ, ಈ ಬಾರಿ ಸರಕಾರ ಯಾವುದೆ ಗೊಂದಲ ಮಾಡದೆ, ಮಹಾನಗರ ಪಾಲಿಕೆ ಸೂಕ್ತ ತೀರ್ಮಾನ ಮಾಡಬೇಕು. ಈದ್ಗಾ ಮೈದಾನ ಮುಸ್ಲಿಮರ ಜಾಗವಲ್ಲ, ಅವರು ವಿವಾದ ಮಾಡಬಾರದು. ಅವರಿಗೂ ವರ್ಷದಲ್ಲಿ ಎರಡು ಬಾರಿ ನಮಾಜ್‍ಗೆ ಅವಕಾಶವಿದೆ’ ಎಂದು ಹೇಳಿದರು. ‘ಗಣೇಶ ಹಬ್ಬ ನಮ್ಮ ಭಾಗದಲ್ಲಿ ವಿಜೃಂಭಣೆಯಿಂದ ಮಾಡುತ್ತೇವೆ. ಡಿಜೆ ಸೇರಿ ಯಾವುದೇ ನಿರ್ಬಂಧ ಹೇರಬಾರದುʼ ಎಂದು ಇದೇ ವೇಳೆ ಅವರು ಆಗ್ರಹಿಸಿದ್ದಾರೆ. ʼʼಬಿಜೆಪಿಯ ಶಾಸಕರು ಯಾರೂ ಕಾಂಗ್ರೆಸ್‍ಗೆ ಹೋಗುವುದಿಲ್ಲʼʼ‘ಬಿಜೆಪಿಯ ಶಾಸಕರು ಯಾರೂ ಕಾಂಗ್ರೆಸ್‍ಗೆ ಹೋಗುವುದಿಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಆ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ ಎಂದಿದ್ದಾರೆ. ಸೋಮಶೇಖರ್, ಹೆಬ್ಬಾರ್ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ. ನಾಳೆ ಏನಾಗುತ್ತೆ ಎಂದೂ ಹೇಳಲು ನಾನು ಭವಿಷ್ಯಗಾರನಲ್ಲ’ ಎಂದು ನುಡಿದರು. ‘ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ರಾಮಲಿಂಗಾರೆಡ್ಡಿಗೆ ಹೇಗೆ ಗೊತ್ತು?. ಅವರೇನು ಬಿಜೆಪಿ ಪಕ್ಷದಲ್ಲಿದ್ದಾರಾ?, ಸದ್ಯದಲ್ಲೇ ಪ್ರತಿಪಕ್ಷ ನಾಯಕನ ನೇಮಕವಾಗುತ್ತದೆ. ಚಲುವರಾಯಸ್ವಾಮಿ ಸೇರಿ ಮತ್ತೊಬ್ಬರ ಹೇಳಿಕೆಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಅವರು ಮೊದಲು ರಾಜೀನಾಮೆ ನೀಡಬೇಕು’ ಎಂದು ಜೋಶಿ ಒತ್ತಾಯಿಸಿದರು. ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಮೋದಿ ನಾಯಕತ್ವ ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಕಾವೇರಿ ವಿಷಯದಿಂದ ಜನರನ್ನು ಬೇರೆಡೆಗೆ ತಿರುಗಿಸಲು ಪಕ್ಷಾಂತರ ವಿಚಾರ ಮುಂದೆ ತಂದಿದ್ದಾರೆ. ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ಆರೋಪಿಸುತ್ತಿದ್ದಾರೆ ಎಂದು ಟೀಕಿಸಿದರು.‘ಈ ಹಿಂದೆ ಮಣಿಪುರ ಸೇರಿದಂತೆ ಈಶಾನ್ಯ ಭಾರತದಲ್ಲಿ ಸಾಕಷ್ಟು ಗಲಭೆಗಳಾಗಿವೆ. ಒಂದೇ ಗಲಭೆಯಲ್ಲಿ ಏಳು ನೂರು ಜನರು ಸಾವನ್ನಪ್ಪಿರುವ ಇತಿಹಾಸವಿದೆ. ಒಬ್ಬರು ಸತ್ತರೂ ನಾವು ಸಂವೇದನಾಶೀಲವಾಗಿ ನೋಡುತ್ತೇವೆ. ಅವರ ಸರಕಾರವಿದ್ದಾಗ ಪಿಎಂ, ಹೋಂ ಮಿನಿಸ್ಟರ್ ಯಾರೂ ಹೋಗಿರಲಿಲ್ಲ. ನಮ್ಮ ಗೃಹಮಂತ್ರಿ ಮೂರು ದಿನ ಮಣಿಪುರದಲ್ಲೇ ಇದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ’ ಎಂದು ಹೇಳಿದರು.  