ಸಾಂದರ್ಭಿಕ ಚಿತ್ರಬೆಂಗಳೂರು, ಆ.17: ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ದತ್ತು ಕೊಡುವ ಪ್ರಸ್ತಾಪಕ್ಕೆ ಕರ್ನಾಟಕ ಜಾಗೃತ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದು, ಸರಕಾರಿ ಶಾಲೆಗಳಿಗೆ ಬಲತುಂಬಿ, ಸಾರ್ವಜನಿಕ ಶಿಕ್ಷಣವನ್ನು ಸಶಕ್ತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.ಖಾಸಗಿ ಶಾಲೆಗಳು ಒಂದೊಂದು ಸರಕಾರಿ ಶಾಲೆಯನ್ನು ದತ್ತು ಪಡೆಯಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ನಿಜಕ್ಕೂ ಅಘಾತಕಾರಿಯಾಗಿದೆ. 6-14 ರ ವಯಸ್ಸಿನ ಮಕ್ಕಳ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಕಡ್ಡಾಯಗೊಳಿಸಿದ ನಮ್ಮ ಸಂವಿಧಾನದ ವಿಧಿ 21ಎ ಆಶಯವನ್ನೇ ಕಡೆಗಣಿಸಿ ಕರ್ನಾಟಕ ಸರಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ‘ಖಾಸಗಿ-ಸಾರ್ವಜನಿಕ-ಸಹಭಾಗಿತ್ವದ ಅಡಿಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮವಲ್ಲ ಎಂದು ಸಾಹಿತಿಗಳು, ಕನ್ನಡ ಪರ  ಹೋರಾಟಗಾರರು, ಶಿಕ್ಷಣ ತಜ್ಞರು, ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ.   ಪ್ರಜಾಪ್ರಭುತ್ವದ ಆಶಯಗಳು ಜೀವಂತವಾಗಿರಬೇಕೆಂದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳ್ಳಬೇಕು, ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕು. ಅಲ್ಲದೆ, ಸರಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ಕೊಡುವ ಬದಲು ಸರಕಾರವೇ ಸಂಪನ್ಮೂಲ ಒದಗಿಸಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.   ಜಾಗೃತ ನಾಗರಿಕ ಕರ್ನಾಟಕದ ಪರವಾಗಿ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ರಾಜೇಂದ್ರ ಚೆನ್ನಿ, ಬಿ.ಶ್ರೀಪಾದ ಭಟ್,  ವಿಮಲಾ.ಕೆ.ಎಸ್.,  ಡಾ.ಬಂಜಗೆರೆ ಜಯಪ್ರಕಾಶ್,  ಟಿ.ಸುರೇಂದ್ರ ರಾವ್,  ಎನ್.ಆರ್.ವಿಶುಕುಮಾರ್,  ಡಾ.ಮೀನಾಕ್ಷಿ ಬಾಳಿ,  ಡಾ.ಬಿ.ಆರ್.ಮಂಜುನಾಥ್, ಡಾ.ಎಚ್.ಜಿ.ಜಯಲಕ್ಷ್ಮಿ, ಡಾ.ಎನ್.ಗಾಯತ್ರಿ ಅವರು ಸರಕಾರಿ ಶಾಲೆಗಳನ್ನು ದತ್ತು ಕೊಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.----------------------------------------------------ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳು ಏಕೆ ದತ್ತು ತೆಗೆದುಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ನೀಡಲು ಅವರ ಅರ್ಹತೆ ಮತ್ತು ಸಾಮರ್ಥ್ಯ ಏನು? ಸರಕಾರಿ ಶಾಲೆಗಳಲ್ಲಿ, ಶಿಕ್ಷಣ ಹಕ್ಕು  ಕಾಯ್ದೆಯ ಸೆಕ್ಷನ್ ೨೩ರ ಪ್ರಕಾರ ಸಮರ್ಥ ಮತ್ತು ಅರ್ಹ ಶಿಕ್ಷಕರನ್ನು ಪಡೆಯಲು ಶಿಕ್ಷಕರನ್ನು ಟಿಇಟಿ ಹಾಗೂ ಸಿಇಟಿ ಪರೀಕ್ಷೆಗಳ ಮೂಲಕ ನೇಮಿಸಲಾಗುತ್ತದೆ. ಆದರೆ, ಇದಾವುದೂ ಖಾಸಗಿ ಶಾಲೆಗಳಲ್ಲಿಲ್ಲ. ಯಾವ ಆಧಾರದಲ್ಲಿ ಸಚಿವರು ಖಾಸಗಿ ಶಾಲೆಗಳಿಗೆ ದತ್ತು ನೀಡುವ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಹೊರಗುತ್ತಿಗೆ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಕಡ್ಡಾಯವಾಗಿರುವ ಮೂಲಹಕ್ಕುಗಳನ್ನು ಒದಗಿಸುವ ಸಂವಿಧಾನಾತ್ಮಕ ಹೊಣೆಗಾರಿಕೆಯಿಂದ ಸಚಿವರು ಜಾರಿಕೊಳ್ಳುತ್ತಿದ್ದಾರೆ. ಇದು ಸಂವಿಧಾನದ ಉಲ್ಲಂಘನೆಯಾಗಿದೆ. ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಸಂವಿಧಾನ ವಿರೋಧಿ ಯೋಜನೆ ಕೈಬಿಡುವಂತೆ ಸಚಿವರಿಗೆ ಸಲಹೆ ನೀಡಬೇಕು.ನಿರಂಜನಾರಾಧ್ಯ ವಿ.ಪಿ.,ಅಭಿವೃದ್ಧಿ ಶಿಕ್ಷಣ ತಜ್ಞ