ಬೆಂಗಳೂರು, ಆ.18: ಬಿಜೆಪಿ ಸರಕಾರದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧತಿ, ಪುನರ್ ಅಂದಾಜು, ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾಡಿರುವ ಆರೋಪದ ಸತ್ಯಾಸತ್ಯತೆಯನ್ನು ಪರಾಮರ್ಶಿಸಲು ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.  ಈ ಸಮಿತಿಯು ಸ್ಥಳ ಹಾಗೂ ದಾಖಲಾತಿಗಳ ಪರಿಶೀಲನೆಯೊಂದಿಗೆ ವಿವರವಾದ ತನಿಖೆಯನ್ನು ನಡೆಸಿ, ಲೋಪ ದೋಷಗಳ ಮಾಹಿತಿ ಹಾಗೂ ತತ್ಸಂಬಂಧಿತ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿತ ಪರಿಪೂರ್ಣ ತನಿಖಾ ವರದಿಯನ್ನು ಸೂಕ್ತ ಅಭಿಪ್ರಾಯ, ಶಿಫಾರಸ್ಸಿನೊಂದಿಗೆ 30 ದಿನಗಳೊಳಗಾಗಿ ಸರಕಾರಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ತನಿಖೆ ಸಂದರ್ಭದಲ್ಲಿ ಯೋಜನೆ, ಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ಬಗ್ಗೆ, ಅನುಷ್ಠಾನಗೊಳಿಸಲಾದ ಕಾಮಗಾರಿ, ಯೋಜನೆಗಳ ಗುಣಮಟ್ಟ, ಕಾಮಗಾರಿಗಳ ಅಂದಾಜುಗಳನ್ನು ನಿಯಮಗಳ ಪ್ರಚಲಿತ ಅನುಸೂಚಿ ದರಗಳ ಅನುಸಾರವಾಗಿ ತಯಾರಿಸಿರುವ ಬಗ್ಗೆ, ಕಾಮಗಾರಿಗಳ ಅಂದಾಜಿನಲ್ಲಿನ ಪ್ರಮಾಣ ವಾಸ್ತವಿಕವಾಗಿದೆಯೇ ಅಥವಾ ಕೃತಕವಾಗಿ ಹೆಚ್ಚಿಸಲಾಗಿದೆಯೇ? ಹೆಚ್ಚಿಸಿದ್ದಲ್ಲಿ, ಅವುಗಳ ಪ್ರಮಾಣ ಮತ್ತು ಹಣಕಾಸಿನ ಬದ್ಧತೆಯ ಜೊತೆಗೆ ಯಾವ ಹಂತದಲ್ಲಿ ಹೆಚ್ಚಿಸಲಾಗಿದೆ ಎಂಬುದನ್ನು ಪರೀಕ್ಷಿಸಬೇಕು.  ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಿರುವ ಹೆಚ್ಚುವರಿ ವ್ಯತ್ಯಾಸದ ಅನಿವಾರ್ಯತೆ ಮತ್ತು ಅಗತ್ಯತೆ, ಅನಿವಾರ್ಯವಾಗಿದ್ದಲ್ಲಿ, ಮೂಲ ಅಂದಾಜಿನಲ್ಲಿ ಕೈ ಬಿಡಲು ಕಾರಣಗಳು ಹಾಗೂ ಇವುಗಳಿಗೆ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿರುವ ಬಗ್ಗೆ, ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್ಲು ಪಾವತಿ ಮಾಡಲಾಗಿದೆಯೇ ಅಥವಾ ಅನುಷ್ಠಾನವಾದ ಕಾಮಗಾರಿಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಬಿಲ್ಲು ಪಾವತಿಸಲಾಗಿದೆಯೇ? ಎಂಬುದನ್ನು ಪತ್ತೆಹಚ್ಚಬೇಕು.  ಈ ಕಾಮಗಾರಿಗಳ ಟೆಂಡರ್‍ಗಳನ್ನು ಕರೆಯುವಾಗ ಕೆಲವೆ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಷರತ್ತುಗಳನ್ನು ರೂಪಿಸಲಾಗಿತ್ತೆ ಎಂಬ ಅಂಶಗಳ ಬಗ್ಗೆಯೂ ತನಿಖೆ ನಡೆಸಬೇಕು.  ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಸಾಮಗ್ರಿಗಳು, ಉಪಕರಣಗಳು, ಇತ್ಯಾದಿಗಳ ಗುಣಮಟ್ಟ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿ, ಅಧಿಕೃತ ಏಜೆನ್ಸಿಗಳಿಂದ ಮಾಡಿಸಲಾಗಿದೆಯೇ? ಒಟ್ಟಾರೆ ಕಾಮಗಾರಿಗಳ ಕುರಿತಾದ ಟೆಂಡರ್ ಪ್ರಕ್ರಿಯೆ ಮತ್ತು ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರೆ ಯಾವುದಾದರೂ ಲೋಪ-ದೋಷಗಳು ಇವೆಯೇ? ಎಂಬುದನ್ನು ಗಮನಿಸಬೇಕು.  ಪರಿಶೀಲನೆಯ ಸಂದರ್ಭದಲ್ಲಿ ಸಮಿತಿಯ ಗಮನಕ್ಕೆ ಬರುವ ಇನ್ನಾವುದೆ ಗಂಭೀರ ವಿಷಯಗಳನ್ನು ತನಿಖಾ ಸಮಿತಿಯ ಅಧ್ಯಕ್ಷರು ಪರಾಮರ್ಶಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ, ತನಿಖಾ ಸಮಿತಿಗೆ ಅಗತ್ಯವಿದ್ದಲ್ಲಿ, ಅಧ್ಯಕ್ಷರ ಕೋರಿಕೆಯ ಮೇರೆಗೆ ಗುಣಮಟ್ಟ ಪರೀಕ್ಷೆಗೆ ನೋಂದಾಯಿತ 3ನೇ ಸ್ವತಂತ್ರ ಸಂಸ್ಥೆಯ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.    