ಬೆಂಗಳೂರು: ಪ್ರಸಕ್ತ ಸಾಲಿನ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಹಿರಿಯ ರಾಜಕಾರಣಿ, ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.ʼಸಾಹಿತಿ ಹಿ.ಶಿ. ರಾಮಚಂದ್ರೇಗೌಡ ಅವರ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ಐದು ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಆ.20ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಗೋಡು ತಿಮ್ಮಪ್ಪ ಅವರಿಗ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆʼ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ರೈತ ಹೋರಾಟದ ಭೂಮಿಯಾದ ಕಾಗೋಡು ಗ್ರಾಮ ತಿಮ್ಮಪ್ಪನವರ ಹುಟ್ಟೂರು.ಸವಾಜಿ ಬೀರಾನಾಯ್ಕ ಮತ್ತು ಬೈರಮ್ಮ ದಂಪತಿಗಳಿಗೆ 3ನೇ ಮಗನಾಗಿ 10-9-1932ರಲ್ಲಿ ಜನಿಸಿದರು. 1952ರಲ್ಲಿ ಐತಿಹಾಸಿಕ ಕಾಗೋಡು ಸತ್ಯಾಗ್ರಹ ಚಳುವಳಿಯನ್ನು ಎಚ್.ಗಣಪತಿಯಪ್ಪ ಅವರು ಆರಂಭಿಸಿದ್ದಾಗ ಕಾಗೋಡು ತಿಮ್ಮಪ್ಪ ನವರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದರು. ಗೇಣಿ ರೈತರ ಸಮಸ್ಯೆಯ ಅರಿವು,ಭೂಮಾಲೀಕರ ಶೋಷಣೆ,ದೌರ್ಜನ್ಯವನ್ನು ಹತ್ತಿರದಿಂದ ಕಂಡಿದ್ದವರು. ಬಡ ಗೇಣಿದಾರರ ಕುಟುಂಬದಲ್ಲಿ ಜನಿಸಿದ್ದ ಅವರು ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ್ದವರು. ವಿದ್ಯಾಭ್ಯಾಸ ಮುಗಿಸಿ ಸಾಗರದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಮೇಲೆ ಕಾಗೋಡು ತಿಮ್ಮಪ್ಪನವರಿಗೆ  ಹೆಚ್ಚಾಗಿ ಗೇಣಿ ರೈತರ ಸಮಸ್ಯೆಯ ಕೇಸುಗಳೇ ಬರುತ್ತಿದ್ದವು. ಹಣಕ್ಕೆ ಒತ್ತಾಯಿಸದೇ ಅವುಗಳನ್ನು ನಡೆಸುತ್ತಿದ್ದರು. ಜೊತೆಗೆ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅವರು  ರೈತ ಪರ ಹೋರಾಟಕ್ಕಾಗಿ ಹಳ್ಳಿ ಹಳ್ಳಿಗಳಿಗೆ ಸೈಕಲ್ ಮೇಲೆ ಸಮಾಜವಾದಿ ಹೋರಾಟಗಾರರೊಡನೆ ಪ್ರವಾಸಮಾಡಿ ಜನ ಜಾಗೃತಿಗೊಳಿಸಿದ್ದರು.  ಸಮಾಜವಾದಿ ಪಕ್ಷವು  1962 ರಲ್ಲಿ ತಿಮ್ಮಪ್ಪನವರನ್ನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಿತು.ಕಾಂಗ್ರೆಸ್ ನ ಅಭ್ಯರ್ಥಿಯ ವಿರುದ್ದ ಪರಭಾವಗೊಂಡಿದ್ದರು.ಈ ಸೋಲನ್ನು ಸವಾಲಾಗಿ ಸ್ವೀಕರಿಸಿದ ಕಾಗೋಡು ಗೇಣಿದಾರರ, ಕೃಷಿ ಕಾರ್ಮಿಕರ , ಹರಿಜನ,ಗಿರಿಜನರ, ದ್ವನಿಯಾಗಿ ಜನಪ್ರಿಯರಾದರು. 1972 ರ ವಿಧಾನಸಭೆಯ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿ  ಜಯಗಳಿಸಿದ್ದಾಗ  ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದರು. ಅರಸು ಅವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತರಲು ಮುಂದಾದಾಗ ಜಾಯಿಂಟ್ ಸೆಲೆಕ್ಟ್ ಕಮಿಟಿಯಲ್ಲಿ ಸದಸ್ಯರಾಗಿ ಕ್ರಾಂತಿಕಾರಕ ಭೂ ಸುಧಾರಣಾ ಕಾಯಿದೆ ಜಾರಿಗೆ ತರಲು ಕಾರಣರಾದರು.ಅರಸು ಅವರ ನೀಲಿಗಣ್ಣಿನ ಹುಡುಗ ಎಂದೇ ಖ್ಯಾತರಾದ ಕಾಗೋಡು ಅವರ  ರಾಜಕೀಯ ಜೀವನದ ದಿಕ್ಕೇ ಬದಲಾಯಿತು.  ಕಾನೂನು ಪದವಿ ಪಡೆದಿದ್ದ ಕಾಗೋಡು ಅವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದರು.ಸದನದಲ್ಲಿ ಈ ಮಸೂದೆಯ ಕುರಿತು ಚರ್ಚೆ ನಡೆದಾಗ ಕಾಗೋಡು  ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂಬುದು ವಿಧಾನ ಸಭಾ ಕಡತಗಳಲ್ಲಿ ದಾಖಲಾಗಿರುವುದು ಸಾಕ್ಷಿ.-----------------------------------------------------------------ಸಿಎಂ ಅಭಿನಂದನೆ''ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿರುವ ಹಿರಿಯರಾದ ಕಾಗೋಡು ತಿಮ್ಮಪ್ಪನವರಿಗೆ ಹಾರ್ದಿಕ ಅಭಿನಂದನೆಗಳು. ಸಮಾಜವಾದಿ ಸಿದ್ಧಾಂತಕ್ಕೆ ತನ್ನನ್ನು ಅರ್ಪಿಸಿಕೊಂಡಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು, ಉಳುವವನನ್ನೇ ಭೂಮಿಯ ಒಡೆಯನಾಗಿ‌ ಮಾಡುವ ಭೂ ಹೋರಾಟದ ಮೂಲಕವೇ ರಾಜಕೀಯ ಜೀವನ‌ ಪ್ರವೇಶಿಸಿದವರು. ದೇವರಾಜ ಅರಸು ಅವರ ಗರಡಿಯಲ್ಲಿಯೇ ಬೆಳೆದಿರುವ ತಿಮ್ಮಪ್ಪನವರು ಭೂ ಸುಧಾರಣಾ ಕಾಯ್ದೆಯಷ್ಟೇ ಕ್ರಾಂತಿಕಾರಿಯಾದ "ವಾಸಿಸುವವನನ್ನೇ ಮನೆ ಒಡೆಯ" ನನ್ನಾಗಿ ಮಾಡುವ ಕ್ರಾಂತಿಕಾರಿ ಕಾಯ್ದೆಯ ರೂವಾರಿಗಳು'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.  