 ಕಾಶಿ ಬೋಪಯ್ಯಚಿಕ್ಕಮಗಳೂರು, ಆ.17: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಖಾನ್‍ಗುಡ್ಡ ಕಾಫಿ ಎಸ್ಟೇಟ್ ವ್ಯವಸ್ಥಾಪಕರೊಬ್ಬರ ಮೃತ ದೇಹ ಕೆರೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.ಮೂಲತಃ ಕೊಡಗು ಜಿಲ್ಲೆಯ ಶೆಟ್ಟಿಗೇರಿ ಗ್ರಾಮದ ನಿವಾಸಿಯಾಗಿರುವ ಕಾಶಿ ಬೋಪಯ್ಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯ ಖಾನ್ ಗುಡ್ಡ ಕಾಫಿ ಎಸ್ಟೇಟ್‍ನಲ್ಲಿ ಕೆಲ  ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಕಾಶಿ ಭೋಪಯ್ಯ ನಾಪತ್ತೆಯಾಗಿದ್ದು, ಗುರುವಾರ ಬೆಳಗ್ಗೆ ಅವರ ಮೃತ ದೇಹ ಎಸ್ಟೇಟಿನಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ. ಕೆರೆ ಪಕ್ಕದಲ್ಲಿ ಕಾಶಿ ಅವರ ಜೀಪ್, ಪರ್ಸ್, ಚಪ್ಪಲಿ ಪತ್ತೆಯಾಗಿದೆ.  ಕಾಶಿ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಕೆರೆಯಲ್ಲಿ ಎಸೆದಿರಬಹುದೆಂದು ಶಂಕಿಸಲಾಗಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.  