ಬೆಂಗಳೂರು, ಆ.16: ನಟ ಉಪೇಂದ್ರರನ್ನು ಬಂಧಿಸದೆ ಪೊಲೀಸರ ವಿಳಂಬ ನೀತಿ ಖಂಡಿಸಿ ಭೀಮ್ ಆರ್ಮಿ ಸಂಘಟನೆಯ ಮುಖಂಡರು ನಗರದ ಟೌನ್‍ಹಾಲ್ ಸಮೀಪದ ಹಲಸೂರು ಗೇಟ್ ಪೊಲೀಸ್ ಠಾಣೆಯ ಬಳಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಭೀಮ್ ಆರ್ಮಿ ಸಂಘಟನೆಯ ಮುಖಂಡ ರಾಜಶೇಖರ್, ನಟ ಉಪೇಂದ್ರ ಅವರ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ಅವಮಾನವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು 48 ಘಂಟೆಯಾದರೂ ಪೊಲೀಸರು ಆರೋಪಿ ಉಪೇಂದ್ರ ಅವರನ್ನು ಬಂಧಿಸಿಲ್ಲ. ಕಾನೂನಿನ ಅಡಿಯಲ್ಲಿ ಎಫ್‍ಐಆರ್ ದಾಖಲಾದ 24 ಗಂಟೆಯೊಳಗೆ ಬಂಧನವಾಗಬೇಕು ಆದರೆ ಪೊಲೀಸರು ಆರೋಪಿ ಬಂಧನಕ್ಕೆ ಮೇಲಾಧಿಕಾರಿಗಳ ಆದೇಶವಿಲ್ಲ ಎಂಬ ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಆರೋಪಿ ಜನಪ್ರಿಯ ವ್ಯಕ್ತಿ ಎನ್ನುವ ಕಾರಣಕ್ಕೆ ಹಿಂದೇಟು ಹಾಕುತ್ತಿರುವ ಪೊಲೀಸರ ನಡೆ ಖಂಡನೀಯವಾಗಿದ್ದು, ಇದರಿಂದ ಸಾಮಾನ್ಯ ಜನರ ಗತಿಯೇನು. ಕೂಡಲೇ ಆರೋಪಿ ಉಪೇಂದ್ರ ಅವರ ಬಂಧನವಾಗದಿದ್ದರೆ ಎಲ್ಲ ದಲಿತ ಸಂಘಟನೆಗಳು ಗೃಹಮಂತ್ರಿಯ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ರಾಜಶೇಖರ್ ಎಚ್ಚರಿಕೆ ನೀಡಿದರು. 