ಬೆಂಗಳೂರು, ಆ.15: ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರು ಮಂಗಳವಾರ ಸ್ವಾತಂತ್ರೋತ್ಸವ ಧ್ವಜಾರೋಹಣದ ನಂತರ ಕಮಲಾಪುರದಲ್ಲಿರುವ ಸ್ವಾತಂತ್ರ್ಯ ಯೋಧರಾದ ಗುಂಡೂರಾವ್ ದೇಸಾಯಿ ಅವರ ನಿವಾಸಕ್ಕೆ ತೆರಳಿ ಸನ್ಮಾನ ಮಾಡಿದರು.ಫಲ ತಾಂಬೂಲ ಜತೆಗೆ  ವೈಯಕ್ತಿಕವಾಗಿ ಚಿನ್ನದ ಹಾರ ಹಾಕಿ ಗೌರವಿಸಿ ಆಶೀರ್ವಾದ ಪಡೆದರು. ನಿಮ್ಮ ತ್ಯಾಗ ಹಾಗೂ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ ಬಂದು ನಾವು ಅಧಿಕಾರ ಪಡೆಯುವಂತಾಗಿದೆ. ನಿಮ್ಮ ಹೋರಾಟದ ಫಲ ಇದು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.  ಗುಂಡೂರಾವ್ ದೇಸಾಯಿ ಅವರು ತಮ್ಮ ನಿವಾಸಕ್ಕೆ ಆಗಮಿಸಿದ ಸಚಿವರನ್ನು ಕಂಡು ಹರ್ಷ ವ್ಯಕ್ತಪಡಿಸಿ, ವಿಜಯನಗರ ಮಾದರಿ ಜಿಲ್ಲೆಯ ಸಂಕಲ್ಪ ತೊಟ್ಟಿರುವ ನಿಮಗೆ ಶುಭವಾಗಲಿ ಎಂದು ಹಾರೈಸಿದರು. ಜಿಲ್ಲಾಧಿಕಾರಿ ದಿವಾಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಪಂಚಾಯತ್ ಸಿಇಒ ಸದಾಶಿವ ಪ್ರಭು ಉಪಸ್ಥಿತರಿದ್ದರು.  