ಬೆಂಗಳೂರು, ಆ.14: ‘ಭೂಮಿ, ವಸತಿ ಹಕ್ಕು ವಂಚಿತರಿಗೆ ಭೂಮಿ ಮತ್ತು ನಿವೇಶನದ ಹಕ್ಕು ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಹೋರಾಟಗಾರ್ತಿ ಡಾ.ವಿಜಯಮ್ಮ ಎಚ್ಚರಿಸಿದ್ದಾರೆ.ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಭೂಮಿ, ವಸತಿ ಹಾಗೂ ನಿವೇಶನ ವಂಚಿತರು ನಡೆಸಿದ ‘ಬರಿಹೊಟ್ಟೆ ಸತ್ಯಾಗ್ರಹ’ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ವಂಚಿತರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಘನತೆಯ ಬದುಕನ್ನು ಕಟ್ಟಿಕೊಡಲು ಹೋರಾಡಿದ ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿ ಅವರೇ ನಮ್ಮ ಇಂದಿನ ಹೋರಾಟಕ್ಕೆ ಪ್ರೇರಣೆ. ಅವರ ಆಶಯಗಳನ್ನು ಈಡೇರಿಸಲು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದರು.ಎಚ್.ಎಸ್.ದೊರೆಸ್ವಾಮಿ ಅವರು ಇಂದು ದೈಹಿಕವಾಗಿ ನಮ್ಮ ಜೊತೆಗಿಲ್ಲ. ಆದರೆ, ಚೈತನ್ಯವಾಗಿ ಈ ಹೋರಾಟದಲ್ಲಿ ನಮ್ಮ ಜೊತೆಯೇ ಇದ್ದಾರೆ. ಅವರು ಹಚ್ಚಿದ ಸ್ವಾಭಿಮಾನದ ದೀಪ ನಮ್ಮೊಳಗೆ ಜೀವಂತವಾಗಿದೆ. ಅವರು ಕಲಿಸಿದ ಬದ್ಧತೆ ಮತ್ತು ಪ್ರಾಮಾಣಿಕತೆ ಈ ಚಳವಳಿಯ ಜೀವಾಳವಾಗಿದೆ. ದೊರೆಸ್ವಾಮಿ ಅವರು ಹೇಳಿದ ‘ಅಂತ್ಯೋದಯ’ದ ಕನಸು ನಮ್ಮ ಹೋರಾಟದ ಧ್ಯೇಯವಾಗಿದೆ. ಅವರು ತೋರಿದ ‘ಸತ್ಯಾಗ್ರಹದ’ ಮಾದರಿ ಹೋರಾಟದ ಹಾದಿಯಾಗಿದೆ ಎಂದು ಡಾ. ವಿಜಯಮ್ಮ ಹೇಳಿದರು.  ಸರಕಾರ ನಮ್ಮ ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ, ಸಭೆ ಕರೆದು ಚರ್ಚಿಸುವ ತನಕ ಈ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ. ಉದ್ದೇಶ ಈಡೇರದೆ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ. ಬಡವರ ದನಿಯನ್ನು ಸರಕಾರ ಸಾವಧಾನವಾಗಿ ಆಲಿಸಿ ಪರಿಹರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಡಾ. ವಿಜಯಮ್ಮ ತಿಳಿಸಿದರು.  ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ ಮಾತನಾಡಿ, ಬಡವರು, ಭೂಮಿ ಮತ್ತು ಹಕ್ಕು ವಂಚಿತರು. ತಮ್ಮ ಹಕ್ಕುಗಳಿಗಾಗಿ ಸುಮಾರು 50 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಯಾವ ಸರಕಾರಗಳು ಅವರ ಹಕ್ಕುಗಳನ್ನು ಒದಗಿಸಲು ಮುಂದಾಗಿಲ್ಲ. ಇದು ನಿರ್ಣಾಯಕ ಹೋರಾಟವಾಗಿದೆ. ರಾಜ್ಯದ ಎಲ್ಲ ಬಡವರಿಗೆ ಭೂಮಿ, ವಸತಿ ದೊರೆಯದೆ ಹೋರಾಟ ನಿಲ್ಲುವುದಿಲ್ಲ. ಹಕ್ಕುಗಳನ್ನು ಒದಗಿಸುವುದಾಗಿ ಸರಕಾರ ಭರವಸೆ ನೀಡಬೇಕು ಎಂದು ಹೇಳಿದರು.  ಹಿಂದಿನ ಸರಕಾರ ಭ್ರಷ್ಟ ಸರಕಾರ, ಜನ ವಿರೋಧಿ ಸರಕಾರವೆಂದು ಸೋಲಿಸಿದ್ದೇವೆ. ಈಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಈ ಸರಕಾರ ಜನಪರವಾಗಿ ಕೆಲಸ ಮಾಡಬೇಕು. ಭೂಮಿ, ವಸತಿ ವಂಚಿತರಿಗೆ ಭೂಮಿ, ವಸತಿ ನೀಡಬೇಕು. ಅದಕ್ಕಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಮಟ್ಟದ ಸಭೆ ಕರೆಯಬೇಕು. ಈ ಸಭೆಗೆ ಕಂದಾಯ ಸಚಿವರು, ಅರಣ್ಯ ಇಲಾಖೆ ಸಚಿವರು, ವಸತಿ ಸಚಿವರು ಹಾಗೂ ಈ ಎಲ್ಲ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಇರಬೇಕು ಎಂದು ಕುಮಾರ್ ಸಮತಳ ಆಗ್ರಹಿಸಿದರು.  ರಾಜ್ಯ ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಹಕ್ಕುಗಳ ಈಡೇರಿಕೆಗಾಗಿ ರೈತರು, ಹೋರಾಟಗಾರರು ಅನೇಕ ಪ್ರತಿಭಟನೆ, ಧರಣಿ, ಸತ್ಯಾಗ್ರಹಗಳನ್ನು ಕೈಗೊಂಡು ಹೋರಾಡುತ್ತಾ ಬಂದಿದ್ದಾರೆ. ಆದರೆ ಈ ಸರಕಾರಗಳು ರೈತರು, ಹೋರಾಟಗಾರರ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿದ್ದು, ಅವುಗಳನ್ನು ಕೂಡಲೇ ರದ್ದು ಪಡಿಸಬೇಕು. 5 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡಿರುವ ಸರಕಾರಿ, ಅರಣ್ಯ ಭೂಮಿಯಲ್ಲಿರುವ ಯಾವುದೇ ಅರ್ಜಿದಾರರನ್ನು ಒತ್ತುವರಿ ಹೆಸರಲ್ಲಿ ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.  ಸತ್ಯಾಗ್ರಹದಲ್ಲಿ ರೈತ ಮುಖಂಡ ವೀರಸಂಗಯ್ಯ, ನೂರ್ ಶ್ರೀಧರ್, ಕರಿಯಪ್ಪ ಗುಡಿಮನಿ, ಸಿರಿಮನೆ ನಾಗರಾಜ್, ಕುಮಾರ್ ಸಮತಳ ಸೇರಿದಂತೆ 11 ಜಿಲ್ಲೆಗಳಿಂದ ನೂರಾರು ಭೂಮಿ ಮತ್ತು ವಸತಿ ಹಕ್ಕು ವಂಚಿತರು ಭಾಗವಹಿಸಿದ್ದರು.  