ಸಿದ್ದರಾಮಯ್ಯ/ಥಾವರ್‌ಚಂದ್‌ ಗೆಹ್ಲೋಟ್  ಬೆಂಗಳೂರು: ರಾಜ್ಯಪಾಲರ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರವನ್ನು ರಾಜಕೀಯ ಕುತಂತ್ರದಿಂದ ಅಸ್ಥಿರಗೊಳಿಸಿ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿರುವ ಕೇಂದ್ರ ಸರಕಾರದ ನಡೆಯನ್ನು ಪ್ರಗತಿಪರ ಬರಹಗಾರರು, ಸಾಹಿತಿಗಳು, ಕಲಾವಿದರು ಸೇರಿದಂತೆ 146 ಮಂದಿ ಗಣ್ಯರು ಖಂಡಿಸಿದ್ದಾರೆ.ಸೋಮವಾರ ಪ್ರೊ.ನಿರಂಜನಾರಾಧ್ಯ ವಿ.ಪಿ., ಬಸವರಾಜ ಸೂಳಿಭಾವಿ, ರಂಜಾನ್ ದರ್ಗಾ, ಡಾ. ಎಚ್.ಎಸ್.ಅನುಪಮಾ, ಡಿ.ಉಮಾಪತಿ, ಡಾ.ವಿಜಯಾ, ಎಂ.ಅಬ್ದುಲ್ ರೆಹಮಾನ್ ಪಾಷ ಸೇರಿದಂತೆ ಮತ್ತಿತರ 146 ಮಂದಿ ಜಂಟಿ ಪ್ರಕಟನೆಯನ್ನು ಹೊರಡಿಸಿದ್ದು, ಸಂವಿಧಾನ ವಿರೋಧಿ ಬಿಜೆಪಿ ಮತ್ತು ರಾಜ್ಯಪಾಲರ ಕುತಂತ್ರಗಳನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.   ತಪ್ಪು ಮಾಡಿದವರಿಗೆ ನೆಲದ ಕಾನೂನಿನ ರೀತಿ ಶಿಕ್ಷೆಯಾಗುವುದನ್ನು ಒಪ್ಪುತ್ತಲೇ, ಅದನ್ನು ರಾಜಕೀಯವಾಗಿ ಬಳಸಿಕೊಂಡು ವಾಮ ಮಾರ್ಗದಿಂದ ಚುನಾಯಿತ ಸರಕಾರಗಳನ್ನು ಬೀಳಿಸುವ ಎಲ್ಲ ಬಗೆಯ ಹುನ್ನಾರಗಳನ್ನು ಬಹಿರಂಗಗೊಳಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.   ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮುಕ್ತ ಜನಪರ ಆಡಳಿತ ನಡೆಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದ್ದು, ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಏಕೈಕ ಮಾರ್ಗವಾಗಿದೆ. ಜೊತೆಗೆ ಎಲ್ಲ ಬಗೆಯ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಭ್ರಷ್ಟ ಚುನಾವಣಾ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಿ ಸುಧಾರಣೆಗಳನ್ನು ತರಲು ಸರಕಾರಗಳು ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.   