ಸಾಂದರ್ಭಿಕ ಚಿತ್ರ    ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಅದರ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಹಣ ಮತ್ತು ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪದಡಿ ಚಿತ್ರನಟ ವೀರೇಂದ್ರ ಬಾಬು ಎಂಬುವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.    ಆರೋಪಿ ವೀರೇಂದ್ರ ಬಾಬು, ‘ಸ್ವಯಂ ಕೃಷಿ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ನಿರ್ಮಾಪಕನೂ ಆಗಿದ್ದ. ಶೃಂಗೇರಿಯ ಮಹಿಳೆಯೊಬ್ಬರು ನೀಡಿದ್ದ ದೂರು ಆಧರಿಸಿ ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.    ದೂರುದಾರ ಮಹಿಳೆಗೆ 2021ರಲ್ಲಿ ಆರೋಪಿ ವೀರೇಂದ್ರ ಬಾಬು ಪರಿಚಯವಾಗಿತ್ತು. ಮಹಿಳೆಯನ್ನು ಭೇಟಿಯಾಗಿದ್ದ ಆರೋಪಿ ಅತ್ಯಾಚಾರ ಎಸಗಿದ್ದ. ಆಗ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಅದನ್ನು ಮಹಿಳೆಗೆ ಕಳುಹಿಸಿ, ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡಿದ್ದ. ಇದರಿಂದ ಹೆದರಿದ್ದ ಮಹಿಳೆ, ಹಂತ ಹಂತವಾಗಿ 15 ಲಕ್ಷ ರೂ. ನೀಡಿದ್ದರು. ಪೊಲೀಸರಿಗೆ ವಿಷಯ ತಿಳಿಸದಂತೆ ಮಹಿಳೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.