ಕೊಪ್ಪಳ : ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ ನಡೆಸುತ್ತಿದ್ದು, ಈ ನಡುವೆ ಪಕ್ಷದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. ಕೊಪ್ಪಳ‌ದ ಮಹಾವೀರ ಭವನದಲ್ಲಿ ಇಂದು ಕಾರ್ಯಕರ್ತರಿಗೆ ಔತಣಕೂಟ ಆಯೋಜನೆ ಮಾಡಿದ್ದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ʼʼರಾಜಕೀಯದಿಂದ ನಾನು ದೂರವಾಗಬೇಕೆಂದಿದ್ದೇನೆ. ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲʼʼ ಎಂದು ಹೇಳಿದ್ದಾರೆ. ʼʼಇಂದಿನ ವ್ಯವಸ್ಥೆಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೂ ನಾನು ಗೆಲ್ಲುವುದಿಲ್ಲ. ನಮ್ಮಂಥವರನ್ನೆಲ್ಲ ಜನ ಗೆಲ್ಲಿಸುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತಿದೆʼʼ ಎಂದು ಹೇಳಿದ್ದಾರೆ. ʼʼನನಗೆ ಅಧಿಕಾರದ ಬಗ್ಗೆ ಆಸೆ ಇಲ್ಲʼʼʼʼನನಗೆ ಅಧಿಕಾರದ ಬಗ್ಗೆ ಆಸೆ ಇಲ್ಲ, ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅಭಿಮಾನವಿದೆ. ಇನ್ನು ಯಾವ ರೀತಿ ಹೇಳಲಿ. ಬಾಂಡ್‌ ಪೇಪರ್‌ ಮೇಲೆ ಬರೆದುಕೊಡ್ಲಾ? ನನಗೆ ಅಧಿಕಾರ ಬೇಡ, ಜನರು ಇದ್ದರೆ ಸಾಕು. ನನಗೆ ಯಾವುದೇ ಅಸಮಾಧಾನ ಇಲ್ಲ, ನಾನು ಅತ್ಯಂತ ತೃಪ್ತಿ ಮನುಷ್ಯ ಎಂದ ಅವರು, ಇಡೀ ದೇಶದ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಕೇವಲ ಕರ್ನಾಟಕದಲ್ಲಿ ಮಾತ್ರ ರಾಜಕೀಯ ಹದಿಗೆಟ್ಟಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದರು. 