ಬೆಂಗಳೂರು, ಆ. 9: ‘ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಆರು ಸ್ಥಾನ ಗೆಲ್ಲಿಸಿರುವುದು ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಹಿಸಲು ಆಗುತ್ತಿಲ್ಲ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬುಧವಾರ ತಮ್ಮ ಮೇಲಿನ ಲಂಚದ ಆರೋಪದ ಹಿನ್ನೆಲೆಯಲ್ಲಿ ರಾಜಭವನದಲ್ಲಿ ರಾಜ್ಯಪಾಲರನ್ನು ನಿಯೋಗದ ಜತೆ ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಹುಶಃ ಮೈತ್ರಿ ಸರಕಾರ ಬರುತ್ತದೆ ಎಂದು ಕುಮಾರಸ್ವಾಮಿ ಅಂದುಕೊಂಡಿದ್ದರು. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ಅವರು ಪದೇ ಪದೇ ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎಂದು ಅನ್ನಿಸುತ್ತಿದೆ’ ಎಂದು ದೂರಿದರು.  ‘ನನ್ನ ವಿರುದ್ಧ ಪತ್ರ ಬರೆದವನು ಯಾರು? ಮನೆ ವಿಳಾಸ ಯಾವುದು ಗೊತ್ತಾಗ್ತಿಲ್ಲ. ಪತ್ರದಲ್ಲಿ ಕುಮಾರಸ್ವಾಮಿ ನಮ್ಮ ನಾಯಕರು ಎಂದು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಈ ಪತ್ರವನ್ನು ಜೆಡಿಎಸ್ ಪಕ್ಷದವರೇ ಸೃಷ್ಟಿಸಿದ್ದಾರೆಂಬುದು ಸ್ಪಷ್ಟ’ ಎಂದು ಚಲುವರಾಯಸ್ವಾಮಿ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.  ‘ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಎಚ್‍ಡಿಕೆಗೆ ಇದು ಸಹಿಸಲು ಆಗುತ್ತಿಲ್ಲ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಇಂತಹ ಕೆಳಮಟ್ಟಕ್ಕೆ ಇಳಿಯುವುದು ಸಂಸ್ಕಾರ ಅಲ್ಲ. ಅವರ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು. ಇದೆಲ್ಲಾ ಜಾಸ್ತಿ ದಿನ ನಡೆಯುವುದಿಲ್ಲ ಎಂದು ಎಂದು ಅವರು ಎಚ್ಚರಿಸಿದರು.  ಶಾಸಕ ನರೇಂದ್ರಸ್ವಾಮಿ ಮಾತನಾಡಿ, ರಾಜ್ಯಪಾಲರಿಗೆ ಅನಾಮಧೇಯ ಪತ್ರ ಹೋಗಿದೆ. ಪತ್ರದಲ್ಲಿ ಯಾವುದೇ ವಿಷಯ ಸ್ಪಷ್ಟತೆಯಿಂದ ಕೂಡಿಲ್ಲ. ಪಕ್ಷದ ಘನತೆ ಗೌರವ ಹಾಳು ಮಾಡುವ ಉದ್ದೇಶದಿಂದ ಮಾಡಿದ್ದಾರೆ. ಪತ್ರ ಬರೆದ ರೂವಾರಿ ಯಾರು? ಏನೂ ಗೊತ್ತಿಲ್ಲ. ಸದ್ಯ ಈ ಪ್ರಕರಣ ತನಿಖೆಯ ಹಂತದಲ್ಲಿದೆ’ ಎಂದು ಅವರು ತಿಳಿಸಿದರು.   ಈ ವೇಳೆ ಜಿಲ್ಲೆಯ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿ ಗಣಿಗ, ಕೆ.ಎಂ.ಉದಯ್ ಗೌಡ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ ಹಾಗೂ ಮಾಜಿ ಶಾಸಕರಾದ ಹೊನ್ನಲಗೆರೆ ಶ್ರೀರಾಮ ಕೃಷ್ಣ, ಕೆ.ಬಿ.ಚಂದ್ರಶೇಖರ್ ಅವರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರೂ ರಾಜ್ಯಪಾಲರಿಗೆ ಕೆಲ ಸ್ಪಷ್ಟೀಕರಣ ನೀಡಿ ಮಾಹಿತಿ ನೀಡಿದೆ ಎಂದು ಗೊತ್ತಾಗಿದೆ.  