ಸಾಂದರ್ಭಿಕ ಚಿತ್ರಬೆಂಗಳೂರು, ಆ.8: ವಿದ್ಯುತ್ ಬಿಲ್ ಹೆಚ್ಚು ಬಂದಿತೆಂದು ಬೆಸ್ಕಾಂನ ಮೀಟರ್ ರೀಡರ್ ನನ್ನು ಥಳಿಸಿರುವ ಘಟನೆ ನಗರದ ಗೋವಿಂದಪುರದಲ್ಲಿ ನಡೆದಿರುವುದು ವರದಿಯಾಗಿದೆ. ಮೀಟರ್ ರೀಡರ್ ನಾಗರಾಜ್ ನಾಯ್ಕ್ ಹಲ್ಲೆಗೊಳಗಾದ ವ್ಯಕ್ತಿ. ಶಂಶಾದ್ ಖಾನ್ (35) ಹಲ್ಲೆ ಮಾಡಿದ ವ್ಯಕ್ತಿ. ಘಟನೆಯಲ್ಲಿ ನಾಗರಾಜ್ ನಾಯ್ಕ್ ಅವರ ಹಲ್ಲು ಮುರಿದಿದೆ. ಗೋವಿಂದಪುರದ 16ನೇ ಕ್ರಾಸ್‍ನಲ್ಲಿರುವ ಶಂಶಾದ್ ಖಾನ್ ಮನೆಯ ವಿದ್ಯುತ್ ಮೀಟರ್ ನನ್ನು ಇತ್ತೀಚಿಗೆ ಬದಲಾಯಿಸಲಾಗಿದ್ದು, ಹಳೆ ಮೀಟರ್ ತೆಗೆದು ಹೊಸ ಮೀಟರ್ ಅಳವಡಿಸಲಾಗಿದೆ.  ನಾಗರಾಜ್ ನಾಯ್ಕ್ ಅವರು ಆ.4 ರಂದು ಬೆಳಿಗ್ಗೆ 11:30ರ ಸುಮಾರಿಗೆ ಶಂಶಾದ್ ಖಾನ್ ಅವರ ಮನೆಯ ಮೀಟರ್ ರೀಡ್ ಮಾಡಿ 458 ರೂ. ಬಾಕಿ ಬಿಲ್ ಸೇರಿದಂತೆ ಒಟ್ಟು 4,026 ರೂ. ಬಿಲ್ ನೀಡಿದ್ದಾರೆ. ಇದನ್ನು ಕಂಡ ಶಂಶಾದ್ ಖಾನ್ ಕಳೆದ ಬಾರಿಗಿಂತ ಈ ಬಾರಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಬಿಲ್ ಬಂದಿದೆ. ಇದು ಹೇಗೆ ಸಾಧ್ಯ ಎಂದು ನಾಗರಾಜ್ ಅವರ ಜೊತೆ ವಾಗ್ವಾದಕ್ಕಿಳಿದ್ದಿದ್ದಾರೆ.  ಇದಕ್ಕೆ ನಾಗರಾಜ್ ನಾಯ್ಕ್ ‘ನಾನು ಮೀಟರ್ ರೀಡಿಂಗ್ ಆಧರಿಸಿಯೇ ಬಿಲ್ ನೀಡಿದ್ದೇನೆ’ ಎಂದು ಹೇಳಿದ್ದಾರೆ. ಆದರೆ ಶಂಶಾದ್ ಖಾನ್, ನಾಗರಾಜ್ ನಾಯ್ಕ್ ಅವರ ಬಳಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ನಾಗರಾಜ್, ಶಂಶಾದ್ ಖಾನ್ ಜೊತೆ ಮಾತು ಆಲಿಸದೆ ಅಕ್ಕಪಕ್ಕದ ಮನೆಗಳ ಮೀಟಿರ್ ರೀಡ್ ಮಾಡಲು ಹೋದರು. ನಾಗರಾಜ್ ನಾಯ್ಕ್ ಮೂರ್ನಾಲ್ಕು ಮನೆ ದಾಟಿ ಮುಂದೆ ಹೋಗುತ್ತಿದ್ದಂತೆ ಹಿಂದೆಯೇ ಬಂದ ಶಂಶಾದ್ ಖಾನ್, ನಾಗರಾಜ್ ನಾಯ್ಕ್ ಅವರ ಬಳಿಗೆ ಹೋಗಿ ಮತ್ತೆ ಜಗಳ ತೆಗೆದಿದ್ದಾರೆ.  ಆಗ ನಾಗರಾಜ್ ನಾಯ್ಕ್ ಬೆಸ್ಕಾಂ ಕಚೇರಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಶಂಶಾದ್ ಖಾನ್, ನಾಗರಾಜ್ ನಾಯ್ಕ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ನಾಗರಾಜ್ ನಾಯ್ಕ್ ತಮ್ಮ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಜಗಳ ಬಿಡಿಸಿ ನಾಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ನಂತರ ನಾಗರಾಜ್ ನಾಯ್ಕ್ ಗೋವಿಂದಪುರ ಪೊಲೀಸ್ ಠಾಣೆಗೆ ದೂರು ನೀಡಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಆರೋಪಿ ಶಂಶಾದ್ ಖಾನ್‍ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಶಾದ್ ಖಾನ್ 300 ಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಬಳಸಿದ್ದರಿಂದ ಅವರು ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‍ಗೆ ಅರ್ಹರಲ್ಲ ಎಂದು ನಾಗರಾಜ್ ನಾಯ್ಕ್ ಹೇಳಿದ್ದಾರೆ.  