ಬೆಂಗಳೂರು: ಗಾಢ ಬಣ್ಣದವನಾಗಿರುವುದಕ್ಕೆ ಗಂಡನನ್ನು ಅವಮಾನಿಸುವುದು ಕ್ರೂರತೆಗೆ ಸಮ ಎಂದು ಹೇಳಿದ ಕರ್ನಾಟಕ ಹೈಕೋರ್ಟ್, ಅರ್ಜಿದಾರನ  ಕೋರಿಕೆಯನ್ನು ಮನ್ನಿಸಿ ವಿಚ್ಛೇದನಕ್ಕೆ ಇದೊಂದು ಬಲವಾದ ಕಾರಣ ಎಂದು ಹೇಳಿ ಆತನಿಗೆ ವಿಚ್ಛೇದನ ಮಂಜೂರುಗೊಳಿಸಿದೆ.ಈ ನಿರ್ದಿಷ್ಟ ಪ್ರಕರಣದಲ್ಲಿ 44 ವರ್ಷದ ವ್ಯಕ್ತಿಗೆ ಆತನ 41 ವರ್ಷದ ಪತ್ನಿಯಿಂದ ವಿಚ್ಛೇದನಕ್ಕೆ ನ್ಯಾಯಾಲಯ ಅನುಮತಿಸಿದೆ.  ಕೋರ್ಟ್‌ ಮುಂದೆ ಹಾಜರುಪಡಿಸಲಾದ ಸಾಕ್ಷಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಗಂಡನ ಗಾಢ ಬಣ್ಣವನ್ನೇ ಮುಂದಿಟ್ಟುಕೊಂಡು ಪತ್ನಿ ಆತನನ್ನು ಅವಮಾನಿಸಿದ್ದೇ ಅಲ್ಲದೇ ಬೇರೆ ಯಾವುದೇ ಕಾರಣವಿಲ್ಲದೆ ಆತನಿಂದ ದೂರ ಸರಿದಿದ್ದಳು ಎಂದು ಕೋರ್ಟ್‌ ಹೇಳಿದೆ.  “ಅದೇ ಸಮಯ ತನ್ನ ತಪ್ಪನ್ನು ಮುಚ್ಚಿ ಹಾಕಲು, ಗಂಡನಿಗೆ ಅಕ್ರಮ ಸಂಬಂಧವಿತ್ತು ಎಂಬ ಸುಳ್ಳು ಆರೋಪಗಳನ್ನು ಹೊರಿಸಿದ್ದಾಳೆ,” ಎಂದು ನ್ಯಾಯಾಂಗ ಗಣನೆಗೆ ತೆಗೆದುಕೊಂಡಿದೆ.  ದಂಪತಿಗೆ 2007ರಲ್ಲಿ ವಿವಾಹವಾಗಿದ್ದು ಒಂದು ಹೆಣ್ಣು ಮಗುವಿದೆ. ವಿಚ್ಛೇದನ ಕೋರಿ ಪತಿ ಬೆಂಗಳೂರಿನ ಕುಟುಂಬ ನ್ಯಾಯಾಲಯಕ್ಕೆ 2012ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ 2017ರಲ್ಲಿ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದ ನಂತರ ಆತ ಹೈಕೋರ್ಟ್‌ ಮೊರೆ ಹೋಗಿದ್ದರು.  ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್‌ ಆರಾಧೆ ಮತ್ತು ರಮಾನಾಥ ಹೆಗಡೆ ಅವರ ವಿಭಾಗೀಯ ಪೀಠ, ಪತಿ ತನ್ನ ಮಗುವಿಗಾಗಿ ಎಲ್ಲಾ ಅವಮಾನ ಸಹಿಸಿಕೊಂಡಿದ್ದನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.  ಆದರೆ ಮಹಿಳೆ ತನ್ನ ವಿರುದ್ಧದ ಆರೋಪ ನಿರಾಕರಿಸಿ ಕೌಟುಂಬಿಕ ಹಿಂಸೆ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದೇ ಅಲ್ಲದೆ ಗಂಡ ಮತ್ತಾತನ ಮನೆಯವರು ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿದ್ದಳು. ಅಷ್ಟೇ ಅಲ್ಲದೆ ಆತನಿಗೆ ಅಕ್ರಮ ಸಂಬಂಧದಿಂದಲೂ ಮಗುವಿದೆ ಎಂದು ಆರೋಪಿಸಿದ್ದಳು.  ಗಂಡನ ಗಾಢ ಬಣ್ಣದ ಕಾರಣ ಆತನ ಜೊತೆ ಬಾಳಲು ಮನಸ್ಸು ಮಾಡದೇ ಇರುವುದರಿಂದ  ಕುಟುಂಬ ನ್ಯಾಯಾಲಯ ವಿಚ್ಛೇದನಕ್ಕೆ ಅನುಮತಿ ನೀಡಬೇಕಿತ್ತು ಎಂದು ಹೇಳಿದ ಹೈಕೋರ್ಟ್‌ ಕುಟುಂಬ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದೆ.