ಬೆಂಗಳೂರು, ಆ.4: ರಾಜ್ಯ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿಯದ್ದು ಯಾವಾಗಲೂ ಹಿಂಡ್ ಅಂಡ್ ರನ್ ಕೇಸ್ ಎಂದು ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅನಗತ್ಯ ಆರೋಪಗಳನ್ನು ಮಾಡುತ್ತಿರುತ್ತಾರೆ. ಅವರ ಆರೋಪಗಳು ಹಿಟ್ ಅಂಡ್ ರನ್ ಕೆಸ್‍ನಂತೆ ಎಂದರು.  ಇತ್ತೀಚೆಗೆ ಪೆನ್‍ಡ್ರೈವ್ ತೋರಿಸಿ ಏನೋ ಆರೋಪ ಮಾಡಿದ್ದರು. ಅದನ್ನು ಸಾಬೀತು ಪಡಿಸಿದ್ರಾ? ಪೆನ್‍ಡ್ರೈವ್‍ನಲ್ಲಿ ಏನಾದರೂ ಇದ್ದರೆ ಅಲ್ಲವೇ ಹೊರಗೆ ಬಿಡುವುದು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.  ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ವಿಚಾರದ ಕುರಿತು ಕೇಂದ್ರ ಸಚಿವ ಪಿಯೂಶ್ ಗೋಯಲ್ ಜೊತೆ ಮಾತನಾಡಿದ್ದೇನೆ. ಅವರು ಅಕ್ಕಿ ನೀಡಲು ಸಿದ್ಧರಿಲ್ಲ. ಕೇಂದ್ರ ಸರಕಾರ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಅವರು ದೂರಿದರು.  