ಬೆಂಗಳೂರು: ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಹು ಭಾಷಾ ನಟ ಕಿಶೋರ್ ಕುಮಾರ್ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.ಮಣಿಪುರ  ಮತ್ತು ಹರಿಯಾಣದಲ್ಲಿ ನಡೆಯುತ್ತಿರುವ ಘಟನೆಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ಅವರು, ʼʼವಿಶ್ವಗುರುಗಳಿದ್ದಾರೆ ಎಚ್ಚರ .. ಈ ವಿಕೃತ ವಿಶ್ವಗುರುವನ್ನು ಹೊಡೆದೋಡಿಸಿ,  ಪ್ರೀತಿಯ ಶಾಂತಿಯ ನಮ್ಮ ಭಾರತಕ್ಕೆ ಮರಳಬೇಕಿದೆʼʼ ಎಂದು ಕರೆ ಕೊಟ್ಟಿದ್ದಾರೆ.ʼʼಮಣಿಪುರದಲ್ಲಿ, ಹರಿಯಾಣದಲ್ಲಿ, ಮುಂಬೈ ರೈಲಿನಲ್ಲಿ , ಟಿವಿ ಚಾನೆಲ್ಲುಗಳಲ್ಲಿ , ಪಾರ್ಲಿಮೆಂಟಿನಲ್ಲಿ , ಕಪಟ ಕ್ಯಾಪಿಟಲಿಸ್ಟುಗಳ ಡ್ರಾಯಿಂಗು ರೂಮಿನಲ್ಲಿ , ಕೋರ್ಟು ಕಚೇರಿಗಳಲ್ಲಿ , ಪೋಲೀಸು ವೇಷದಲ್ಲಿ , ಐಟಿ ಸೆಲ್ಲುಗಳಲ್ಲಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಮೂಲೆ ಮೂಲೆಯಲ್ಲಿ..ದೇವರ ಹೆಸರಲ್ಲಿ, ಅಧಿಕಾರ ದಾಹದ ಹೊಲಸಲ್ಲಿ , ಮತಿಭ್ರಮಿತರಾದ ಮತಾಂಧ ವಿಶ್ವಗುರುಗಳಿದ್ದಾರೆ.. ಎಚ್ಚರʼʼ ಎಂದು ಕಿಡಿಕಾರಿದ್ದಾರೆ. ಮುಂದುವರಿದು ʼʼಇವರಿಗೆ ಜೈ ಅನ್ನದಿದ್ದರೆ, ಇವರನ್ನು ಪ್ರಶ್ನಿಸಿದರೆ … ಯೋಚಿಸಿದರೂ ಸಹ … ಗುಂಡಿಕ್ಕುತ್ತಾರೆ, ಬಡಿದು ಕೊಲ್ಲುತ್ತಾರೆ, ಮನೆ ಮಠ ಸುಡುತ್ತಾರೆ, ಕೆಡವುತ್ತಾರೆ, ಮಕ್ಕಳನ್ನು ಕಡಿದು ಕೊಲ್ಲುತ್ತಾರೆ. ಬೆತ್ತಲೆ ಮೆರವಣಿಗೆ ಮಾಡಿಸಿ ಅತ್ಯಾಚಾರ ಮಾಡುತ್ತಾರೆ, ದೇಶದ ಕೀರ್ತಿ ವಿಶ್ವದಲ್ಲೆಲ್ಲ ಹರಡುತ್ತಾರೆ..ʼʼ ಎಂದು ಕಿಶೋರ್ ಕುಮಾರ್ ಬರೆದುಕೊಂಡಿದ್ದಾರೆ.   