ಹೊಸದಿಲ್ಲಿ, ಆ. 3: ‘ಬಿಬಿಎಂಪಿ ಕಾಮಗಾರಿಗಳ ಅಕ್ರಮದ ತನಿಖೆ ಮಾಡುವಂತೆ ಬಿಜೆಪಿ ಶಾಸಕರೇ ಸಲಹೆ ನೀಡಿದ್ದಾರೆ. ಅವರ ಸಲಹೆ ಗಮನದಲ್ಲಿಟ್ಟುಕೊಂಡು ವಾಸ್ತವಾಂಶ ಅರಿಯಲು ವರದಿ ಕೇಳಿದ್ದೇನೆʼ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗುರುವಾರ ದಿಲ್ಲಿ ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ʼʼಅನೇಕರು ವರ್ಷಾನುಗಟ್ಟಲೆಯಿಂದ ಬಿಲ್‍ಗಾಗಿ ಕಾಯುತ್ತಿದ್ದಾರೆ. ಯಾರು ಕೆಲಸ ಕೊಟ್ಟಿದ್ದಾರೆ? ಯಾವ ಕೆಲಸ ಆಗಿದೆ, ಅದರ ಗುಣಮಟ್ಟ ಏನಿದೆ? ಎಂದು ಪರಿಶೀಲನೆ ಆಗಬೇಕು. ಈ ವರದಿ ಬಂದ ನಂತರ ವಿವರವಾಗಿ ಮಾತನಾಡುತ್ತೇನೆʼʼ ಎಂದು ಅವರು ತಿಳಿಸಿದರು. ‘ನೀರು ಹಂಚಿಕೆ ವಿವಾದ ಸಂಬಂಧ ಕಾನೂನು ತಜ್ಞರ ಜತೆ ಸಭೆ ಮಾಡಲಾಗಿದೆ. ಈವರೆಗೂ ನಾವು ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಮಹದಾಯಿ, ಕಾವೇರಿ, ಕೃಷ್ಣಾ ನದಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ವಿಚಾರವಾಗಿ ಮಾಹಿತಿ ಪಡೆದಿದ್ದೇನೆ. ಉಳಿದ ವಿಚಾರವನ್ನು ಸಿಎಂ ಜತೆ ಚರ್ಚೆ ಮಾಡಿ, ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಉಳಿದ ನಿರ್ದೇಶನ ನೀಡಲಾಗುವುದು. ನಮಗೆ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ. ಆದಷ್ಟು ಬೇಗ ಎಲ್ಲ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆʼ ಎಂದು ನುಡಿದರು.ʼಸಂಚಾರ ದಟ್ಟಣೆ ನಿವಾರಣೆಗೆ ಜಾಗತಿಕ ಟೆಂಡರ್ʼಬೆಂಗಳೂರು ಸಂಚಾರ ದಟ್ಟಣೆ ನಿವಾರಣೆ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ಚರ್ಚೆ ಮಾಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಈಗಾಗಲೇ ಬಬಿಎಂಪಿ ಹಾಗೂ ಬಿಡಿಎ ಮೂಲಕ ಎಕ್ಸ್ ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಜಾಗತಿಕ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಲ್ಲಿಕೆಗೆ ಆ.8 ಕೊನೆಯ ದಿನವಾಗಿದೆ’ ಎಂದು ತಿಳಿಸಿದರು. ‘ಬೆಂಗಳೂರಿನಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಈ ರಸ್ತೆಗಳ ಮೂಲಕ ಬೆಂಗಳೂರಿಗೆ ಹೆಚ್ಚಿನ ವಾಹನಗಳು ಆಗಮಿಸಿ ಸಂಚಾರ ದಟ್ಟಣೆಗೆ ಕಾರಣವಾಗಿವೆ. ಈ ಸಂಚಾರ ದಟ್ಟಣೆ ನಿವಾರಣೆಗೆ ಕೇಂದ್ರ ಹೆದ್ದಾರಿ ಪ್ರಾಧಿಕಾರದ ಮೂಲಕ ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವರ ಜತೆ ಚರ್ಚಿಸಿದ್ದೇನೆ. ನಮ್ಮ ವಿಚಾರಕ್ಕೆ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.  